ನರೇಂದ್ರ ಮೋದಿ ಅವರು ಸ್ವತಃ ಅವರ ಪಕ್ಷದಿಂದಲೇ ವಾಗ್ದಾಳಿಗೆ ತುತ್ತಾಗಿರಬಹುದು. ಆದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಚುನಾವಣೆ ವಿಷಯವಲ್ಲ ಎಂದು ಗುಜರಾತಿನ ಚುನಾವಣೆ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.
ಮೋದಿ ಮತ್ತು ಅವರ ಸಹಚರರು ಗುಜರಾತಿನಲ್ಲಿ ಹುಟ್ಟುಹಾಕಿದ ಭಯಾನಕತೆ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಾವು ರಾಜ್ಯ ಮತ್ತು ಜನತೆ ಇಬ್ಬರನ್ನೂ ಉಳಿಸಿಕೊಳ್ಳಬೇಕಾಗಿದೆ ಎಂದು ಹರಿಪ್ರಸಾದ್ ಹೇಳಿದರು.ಡಿ.11 ಮತ್ತು 16ರಂದು ಗುಜರಾತಿನ 182 ಕ್ಷೇತ್ರಗಳಲ್ಲಿ ಮತದಾರರು ಚುನಾವಣೆಗೆ ಹೋಗಲಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆಯ ಸದಸ್ಯರಾಗಿರುವ ಹರಿಪ್ರಸಾದ್ ಮೋದಿ ವಿರುದ್ದ ತಮ್ಮ ಅಸಹಜ ದಾಳಿಯಿಂದ ಸುದ್ದಿಯಲ್ಲಿದ್ದಾರೆ. ಮೋದಿ ಚರಂಡಿಯಲ್ಲಿ ಜನಿಸಿದ್ದಾರೆ ಎಂದು ಹೇಳುವ ಮೂಲಕ ಅವರು ವಿವಾದದ ಕಿಡಿ ಸ್ಫೋಟಿಸಿದ್ದರು.
ಅವರ ಪ್ರತಿಕ್ರಿಯೆಗೆ ವಿವರಣೆ ನೀಡುವಂತೆ ಚುನಾವಣೆ ಆಯೋಗ ನೋಟೀಸ್ ಕಳಿಸಿದ್ದರೂ ಮೃದು ಮಾತಿನ ವ್ಯಕ್ತಿಯಾದ ಹರಿಪ್ರಸಾದ್ ಸಂದರ್ಶನದಲ್ಲಿ ತಮ್ಮ ಹೇಳಿಕೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ನಮ್ಮ ಪ್ರತಿಕ್ರಿಯೆ ಇನ್ನೂ ಗಡುಸಾಗಿರಬೇಕಿತ್ತು ಎಂದು ಹೇಳಿದರು. ಆದರೆ ಆ ಮಟ್ಟಕ್ಕೆ ಇಳಿಯಲು ನಮ್ಮ ಸಂಸ್ಕೃತಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ವಿದೇಶಿ ಮೂಲದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ವಿರುದ್ಧ ಬಿಜೆಪಿ ವಾಗ್ದಾಳಿಯನ್ನು ಉಲ್ಲೇಖಿಸಿ ಅವರು ಏನು ಮಾಡುತ್ತಿದ್ದಾರೆಂಬುದನ್ನು ನಾವು ಹೇಳುವ ಅಗತ್ಯವಿಲ್ಲ ಎಂದರು.
ಗುಜರಾತಿನಲ್ಲಿ ವಾಸ್ತವ ಸ್ಥಿತಿಯೇನೆಂದು ಜನತೆಗೆ ಅರಿವಾಗುತ್ತಿದೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಕೊಚ್ಚಿಕೊಳ್ಳುವ ಮೋದಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ 165,000 ರೈತರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಜನರಲ್ಲಿ ಹೆದರಿಕೆ ಹುಟ್ಟಿಸಿದ್ದಾರೆಂದು ನುಡಿದರು.
|