ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ರೊನೆನ್ ಸೇನ್ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸುವವರಿಗೆ ತಲೆಯಿಲ್ಲದ ಕೋಳಿಗಳು ಎಂಬ ಹೇಳಿಕೆಗೆ ಸಂಬಂಧಪಟ್ಟಂತೆ ಶುಕ್ರವಾರ ರಾಜ್ಯಸಭೆಯ ಹಕ್ಕುಬಾಧ್ಯತಾ ಸಮಿತಿ ಎದುರು ಹಾಜರಾಗಲಿದ್ದಾರೆ
ರಾಜ್ಯಸಭೆಯ ಉಪಸಭಾಪತಿ ಕೆ.ರೆಹ್ಮಾನ್ ಖಾನ್ ರಾಜ್ಯಸಭೆ ಹಕ್ಕುಬಾಧ್ಯತಾ ಸಮಿತಿಯ ನೇತೃತ್ವ ವಹಿಸಿದ್ದಾರೆ. ಕಳೆದ ಗುರುವಾರ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯ ಎದುರು ಹಾಜರಾದ ಸೇನ್ ತಲ್ಲೆಯಿಲ್ಲದ ಕೋಳಿಗಳು ಹೇಳಿಕೆಗೆ ಕ್ಷಮಾಪಣೆ ಕೋರಿದ್ದರು. ತಾವು ಸಂಸತ್ ಸದಸ್ಯರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಲ್ಲ ಎಂದು ಸೇನ್ ಸಮಜಾಯಿಷಿ ನೀಡಿದ್ದರು.
ಸೇನ್ ಕ್ಷಮಾಪಣೆ ಕೋರಿದ ಹಿನ್ನೆಲೆಯಲ್ಲಿ ಲೋಕಸಭೆ ಹಕ್ಕುಬಾಧ್ಯತಾ ಸಮಿತಿ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಸಂಭವವಿಲ್ಲ. ಸುದ್ದಿ ಪೋರ್ಟಲ್‌ಗೆ ಸೇನ್ ನೀಡಿದ ಪ್ರತಿಕ್ರಿಯು ಆ.20ರಂದು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ರಿಡಿಫ್ ಕಾಂಗೆ ನೀಡಿದ ಸಂದರ್ಶನದಲ್ಲಿ ಸೇನ್ ಮಾತನಾಡುತ್ತಾ, ಇಲ್ಲಿ ವಾಷಿಂಗ್ಟನ್‌ನಲ್ಲಿ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ.
ಅಲ್ಲಿ ನವದೆಹಲಿಯಲ್ಲಿ ಭಾರತದ ಸಚಿವಸಂಪುಟ ಅದನ್ನು ಅನುಮೋದಿಸಿದೆ. ಆದ್ದರಿಂದ ನೀವು ತಲೆಇಲ್ಲದ ಕೋಳಿಗಳ ರೀತಿಯಲ್ಲಿ ಯಾಕೆ ಅಲ್ಲಿ ಇಲ್ಲಿ ಪ್ರತಿಕ್ರಿಯೆಗಾಗಿ ಓಡಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದರು. ಆದಾಗ್ಯೂ, ಅವರು ಬಳಿಕ ಈ ಬಗ್ಗೆ ಕ್ಷಮಾಪಣೆ ಕೋರಿ ಅದು ಪತ್ರಕರ್ತರನ್ನು ಉದ್ದೇಶಿಸಿ ಹೇಳಿದ್ದೇ ಹೊರತು ರಾಜಕಾರಣಿಗಳನ್ನಲ್ಲ ಎಂದು ಹೇಳಿದ್ದರು.
|