ಬೆಂಗಳೂರಿನ ಕಾಲ್ ಸೆಂಟರ್ ಯುವತಿ ಪ್ರತಿಭಾ ಕೊಲೆ ಪ್ರಕರಣ ನೆನಪಿನಿಂದ ಇನ್ನೂ ಮಾಸುವ ಮುನ್ನವೇ ಪುಣೆಯಲ್ಲಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ, ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
ಪುಣೆಯಲ್ಲಿ ವಿಪ್ರೋ ಕಾಲ್ ಸೆಂಟರ್ ಕೇಂದ್ರವಾದ ಸ್ಪೆಕ್ಚ್ರಾಮೈಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷ ವಯಸ್ಸಿನ ಜ್ಯೋತಿ ಚೌಧುರಿ ಅವರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಶನಿವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಯಿತು.
ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯ ವಾಡ್‌ಗಾಂವ್‌ನಲ್ಲಿ ಶುಕ್ರವಾರ ಸಂಜೆ ಜ್ಯೋತಿಯ ಮೃತದೇಹ ಪತ್ತೆಯಾಗಿದೆ. ಕಾಲ್ ಸೆಂಟರ್‌ಗೆ ವಾಹನಗಳನ್ನು ಪೂರೈಸುತ್ತಿದ್ದ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರೆಂದು ಹೇಳಲಾಗಿದೆ.
ಜ್ಯೋತಿ ಬಿಪಿಒನ ಪಿಕ್ ಅಪ್ ವಾಹನದಲ್ಲಿ ರಾತ್ರಿ 10 ಗಂಟೆಗೆ ಆಫೀಸಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಳು ಎಂದು ಪೊಲೀಸ್ ಉಪಆಯುಕ್ತ ಚಂದ್ರಶೇಖರ್ ದೈತಂಕರ್ ದೃಢಪಡಿಸಿದ್ದಾರೆ. ಜ್ಯೋತಿಯ ಬಂಧುಗಳು ದೂರು ನೀಡಿದ ಬಳಿಕ ಪೊಲೀಸರಿಗೆ ಮರುದಿನ ಸಂಜೆ 4 ಗಂಟೆಗೆ ವಿಷಯ ತಿಳಿಯಿತು.ನ.1ರಂದು ಚಾಲಕ ಮತ್ತು ಅವನ ಸಹಚರ ಜ್ಯೋತಿಯನ್ನು ಕಚೇರಿಗೆ ಕರೆದುಕೊಂಡು ಹೋದರೆಂದು ತನಿಖೆಯಿಂದ ಬಹಿರಂಗವಾಗಿದೆ.
ಬಳಿಕ ಯುವತಿಯನ್ನು ಸಮೀಪದ ಗ್ರಾಮಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದರೆಂದು ದೈತಂಕರ್ ತಿಳಿಸಿದರು. 22 ವರ್ಷ ವಯಸ್ಸಿನ ಯುವತಿ ತನ್ನ ಸ್ನೇಹಿತನ ಜತೆ ಮಾತನಾಡುತ್ತಿದ್ದಾಗ ಕರೆ ಡಿಸ್‌ಕನಕ್ಟ್ ಆಯಿತೆಂದು ಹೇಳಲಾಗಿದೆ. ತಕ್ಷಣವೇ ಅವನು ದೆಹಲಿಯಲ್ಲಿರುವ ಮೃತಳ ಸೋದರನಿಗೆ ಸುದ್ದಿಮುಟ್ಟಿಸಿದನೆಂದು ತಿಳಿದುಬಂದಿದೆ.
|