ಜಮ್ಮು ಕಾಶ್ಮೀರದಲ್ಲಿ ಬಂಧಿತಳಾದ ಹಿಜ್ಬುಲ್ ಮುಜಾಹಿದ್ದೀನ್‌ನ ಪ್ರಥಮ ಮಹಿಳಾ ಉಗ್ರಗಾಮಿ ನಹೀದಾ ಅಲ್ತಾಫ್ ಜಾಮೀನು ಅರ್ಜಿಯನ್ನು ಸ್ಥಳೀಯ ಕೋರ್ಟ್ ನಿರಾಕರಿಸಿದೆ. ನಹೀದಾಳನ್ನು ತಾಂಡಾ ಚೌಕಿ ಬಳಿ ಸೆ.7ರಂದು 8 ಗ್ರೆನೇಡ್‌ಗಳು ಮತ್ತು ಒಂದು ಗ್ರೆನೇಡ್ ಲಾಂಚರ್ ಸಮೇತ ಬಂಧಿಸಲಾಗಿತ್ತು.
ನಹೀದಾ ಸುರಂಕೋಟೆಯಿಂದ ಜಮ್ಮುವಿಗೆ ಖಾಸಗಿ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸರು ನಡೆಸಿದ ಶೋಧದಲ್ಲಿ ಗ್ರೆನೇಡ್‌ಗಳು ಪತ್ತೆಯಾಗಿರುವುದಾಗಿ ಪೊಲೀಸ್ ವರದಿ ಬಹಿರಂಗಪಡಿಸಿದೆ ಎಂದು ಎರಡನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಕೆ. ಕೌಲ್ ತಿಳಿಸಿದರು. ಜಾಮೀನು ಅರ್ಜಿಯನ್ನು ವಿರೋಧಿಸಿದ ಪ್ರಾಸಿಕ್ಯೂಷನ್, ಅರ್ಜಿದಾರಳು ಗಂಭೀರ ಅಪರಾಧದಲ್ಲಿ ನಿರತಳಾಗಿದ್ದು, ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದು ಅಪರಾಧವನ್ನು ಸಾಬೀತು ಮಾಡುತ್ತದೆ ಎಂದು ತಿಳಿಸಿದ್ದರು.
ಆದರೆ ನಹೀದಾ ಪರ ವಕೀಲ ಪ್ರತಿವಾದ ಮಂಡಿಸಿ ಪೊಲೀಸರು ತಮ್ಮ ಕಕ್ಷಿದಾರರ ಮೇಲೆ ಸುಳ್ಳು ಆಪಾದನೆ ಹೇರಿ ಸಿಕ್ಕಿಹಾಕಿಸಿದ್ದಾರೆ ಎಂದು ಹೇಳಿದರು. ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ತನ್ನ ತಾಯಿಗೆ ಚಿಕಿತ್ಸೆ ನೀಡಲು ನಹೀದಾ ಅಮೃತಸರಕ್ಕೆ ತೆರಳುತ್ತಿದ್ದಾಗ ಪೊಲೀಸರು ಅವಳನ್ನು ಬಂಧಿಸಿದ್ದಾರೆಂದು ಅವರು ವಾದಿಸಿದರು.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಯಿಂದ ವಿವಿಧ ಹೆಸರುಗಳಲ್ಲಿರುವ ಮೂರು ಗುರುತಿನ ಕಾರ್ಡ್‌ಗಳನ್ನು ವಶಪಡಿಸಿಕೊಂಡಿರುವುದನ್ನು ಗಮನಕ್ಕೆ ತಂದರು. ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಪೊಲೀಸರ ಎದುರು ಆರೋಪಿತಳು ಬಹಿರಂಗಪಡಿಸಿದ್ದರಿಂದ ಅನೇಕ ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ತನಿಖೆಯ ಸಂದರ್ಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನಗರದಲ್ಲಿ ವ್ಯಾಪಕ ಜಾಲ ನಿರ್ಮಿಸಿದ್ದು ಮೂವರು ಉಗ್ರರು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಆರೋಪಿತಳು ಹೇಳಿದ್ದಳು.
|