ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ಬಳಿಕ ಹಂಗಾಮಿ ಸಂವಿಧಾನಿಕ ಆದೇಶವನ್ನು ಜಾರಿ ಮಾಡಿದ್ದಾರೆಂದು ಪಾಕಿಸ್ತಾನ ಟೆಲಿವಿಷನ್ ಪ್ರಕಟಿಸಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಇಫ್ತಿಕರ್ ಚೌಧರಿ ಅವರನ್ನು ವಜಾ ಮಾಡಿ ಅವರ ಬದಲಿಗೆ ಅಬ್ದುಲ್ ಹಮೀದ್ ದೋಗಾರ್ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮುಷರ್ರಫ್ ನೇಮಿಸಿದ್ದಾರೆ. ಹಂಗಾಮಿ ಸಂವಿಧಾನಿಕ ಘೋಷಣೆಯಡಿ ಸಂವಿಧಾನ ಅಮಾನತಿನಲ್ಲಿರುವುದು. ಫೆಡರಲ್ ಸಂಪುಟದ ಕಾರ್ಯ ಸ್ಥಗಿತಗೊಳ್ಳುವುದು ಮತ್ತು ನ್ಯಾಯಾಧೀಶರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಬೇಕಾಗುತ್ತದೆ.
ಆದರೆ ಸುಪ್ರೀಂಕೋರ್ಟ್‌ನ 8 ನ್ಯಾಯಾಧೀಶರು ತುರ್ತುಪರಿಸ್ಥಿತಿ ಜಾರಿಯನ್ನು ನಿರಾಕರಿಸಿದ್ದಾರೆ. ಏತನ್ಮಧ್ಯೆ ಸೇನಾಪಡೆಯು ಸುಪ್ರೀಂಕೋರ್ಟ್ ಒಳಗೆ ಪ್ರವೇಶಿಸಿ ಇಫ್ತಿಕರ್ ಚೌಧರಿ ಅವರನ್ನು ವಶಕ್ಕೆ ತೆಗೆದುಕೊಂಡಿದೆಯೆಂದು ಡಾನ್ ನ್ಯೂಸ್ ವರದಿ ಮಾಡಿದೆ.
ಖಾಸಗಿ ಟೆಲಿವಿಷನ್ ಚಾನೆಲ್‌ಗಳ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ. ಏತನ್ಮಧ್ಯೆ, ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ದುಬೈನಿಂದ ಹೊರಟು ಪಾಕಿಸ್ತಾನಕ್ಕೆ ಕಾಲಿರಿಸಿದ್ದಾರೆ. ಅವರನ್ನು ಸೇನಾಡಳಿತ ಗೃಹಬಂಧನದಲ್ಲಿ ಇರಿಸುವ ಸಂಭವವಿದೆಯೆಂದು ಹೇಳಲಾಗಿದೆ.
ಐರೋಪ್ಯ ರಾಷ್ಟ್ರಗಳು ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಘೋಷಣೆಗೆ ಖಂಡನೆ ವ್ಯಕ್ತಪಡಿಸಿವೆ. ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಕಂಡೋಲೀಜಾ ರೈಸ್ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಸಂವಿಧಾನೇತರ ಕ್ರಮಕ್ಕೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
|