ಉತ್ತರಪ್ರದೇಶದಲ್ಲಿ ನಡೆದ ನಿತಾರಿ ಸರಣಿ ಹತ್ಯಾಕಾಂಡ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದ ಜತೀನ್ ಸರ್ಕಾರ್ ನಿಗೂಢ ಹತ್ಯೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಲದ ಪೊಲೀಸರು ಸಿಬಿಐ ನಿರ್ದೇಶಕ ವಿಜಯ್ ಶಂಕರ್ ಹಾಗೂ ಇಬ್ಬರು ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಶಂಕರ್ ಸೇರಿದಂತೆ ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಜೆಎಂ ಗಿಲಾನಿ ಹಾಗೂ ಉತ್ತರಪ್ರದೇಶದ ನಿತಾರಿ ಠಾಣೆಯ ಅಮಾನತುಗೊಂಡ ಸರ್ಕಲ್ ಅಧಿಕಾರಿ ದಿನೇಶ್ ಯಾದವ್ ವಿರುದ್ಧ ಮುಶಿರಾಬಾದ್ ಜಿಲ್ಲಾ ವ್ಯಾಪ್ತಿಯ ಬೆಹರಾಮ್‌ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದರು. ಮೂರು ಮಂದಿ ಹಿರಿಯ ಅಧಿಕಾರಿಗಳ ಮೇಲೆ ಭಾರತೀಯ ದಂಡ ಸಂಹಿತೆ 302,201ಹಾಗೂ34ರ ಕಲಂ ಅನ್ವಯ ದೂರು ದಾಖಲಿಸಲಾಗಿದೆ.
ಈ ಅಧಿಕಾರಿಗಳ ವಿರುದ್ಧ ನವೆಂಬರ್ 1ರಂದು ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಮುಶಿರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶ್ರೀವಾಸ್ತವ್ ಅವರು ಖಚಿತಪಡಿಸಿದ್ದಾರೆ.
ಸರಣಿ ಹತ್ಯಾಕಾಂಡದ ಮುಖ್ಯ ರೂವಾರಿಯಾಗಿದ್ದ ಮೊನಿಂದರ್ ಸಿಂಗ್ ಪಂದೇರ್‌ಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದಕ್ಕೆ ಸರ್ವೊಚ್ಛನ್ಯಾಯಾಲಯ ವಿವರಣೆ ಕೇಳಿ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
|