ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಪರಿಸ್ಥಿತಿ ಮತ್ತು ಭಾರತೀಯ ಜನತಾ ಪಕ್ಷ ಮತ್ತು ಜೆಡಿಎಸ್ ಸರಕಾರ ರಚನೆಗೆ ಸಂಬಂಧಿಸಿದ ಮಂಡಿಸಿರುವ ಬೇಡಿಕೆಯನ್ನು ಗಮನಿಸಿ, ರಾಜ್ಯ ರಾಜಪಾಲರು ಅಂತಿಮ ವರದಿಯೊಂದಿಗೆ ದೆಹಲಿಗೆ ಇಂದು ಪ್ರಯಾಣ ಬೆಳೆಸಿದ್ದು. ನವದೆಹಲಿಯಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಸರಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ವಿಳಂಬ ನೀತಿ ವಿರುದ್ಧ ಭಾರತೀಯ ಜನತಾ ಪಕ್ಷ ತನ್ನ ಟೀಕೆಯನ್ನು ಮುಂದುವರಿಸಿದೆ. ಬಿಎಸ್ ಯಡ್ಯೂರಪ್ಪ ನೆತೃತ್ವದ ಸರಕಾರದ ರಚನೆಯ ಕುರಿತಂತೆ ಕೇಂದ್ರ ಗೃಹಖಾತೆ ಸಚಿವ ಶಿವರಾಜ್ ಪಾಟೀಲ್ ಅವರೊಂದಿಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಮಾತುಕತೆ ನಡೆಸಲಿದ್ದಾರೆ.
ಅಕ್ಟೋಬರ್ 31 ರ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ಘಟನೆಗಳ ಕುರಿತು ತಮ್ಮ ವರದಿಯಲ್ಲಿ ಸವಿಸ್ತಾರ ಮಾಹಿತಿ ನೀಡಿದ್ದು, ಅದರಲ್ಲಿ ಕುಮಾರಸ್ವಾಮಿ ನೆತೃತ್ವದ ಸರಕಾರದ ಪತನ, ಸರಕಾರ ರಚನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಭಾರತೀಯ ಜನತಾ ಪಕ್ಷ ನಡೆಸಿದ ಧರಣಿ, ಮತ್ತು ಸರಕಾರ ರಚನೆಗೆ ಸಂಬಂಧಿಸಿದಂತೆ ಪಡೆದುಕೊಂಡಿರುವ ಸಂವಿಧಾನ ತಜ್ಞರ ಅಭಿಮತ ಮುಂತಾದವುಗಳು ಒಳಗೊಂಡಿವೆ ಎಂದು ರಾಜಭವನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯಪಾಲರು ಕುಮಾರಸ್ವಾಮಿ ಮತ್ತು ಭಾರತೀಯ ಜನತಾ ಪಕ್ಷದ ನಿಯೋಗದೊಂದಿಗೆ ನಡೆಸಿದ ಮಾತುಕತೆಯ ವಿವರವನ್ನು ವರದಿಯಲ್ಲಿ ನಮೂದಿಸಿದ್ದಾರೆ ಅಲ್ಲದೆ ಪತ್ರಿಕೆಯಲ್ಲಿ ವರದಿಯಾಗಿರುವ ಸುದ್ದಿಗಳನ್ನು ತಮ್ಮ ವರದಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರಪತಿ ಭವನದ ಎದುರು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪೆರೆಡ್ ನಡೆಸುವ ಕುರಿತು ಮಾಡಿದ ಘೋಷಣೆಯ ನಂತರ ರಾಜ್ಯಪಾಲರು ದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಇಂದು ಸಾಯಂಕಾಲ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
|