ಹೆಚ್ಚು ಗಮನ ಸೆಳೆದ ಜೆಸ್ಸಿಕಾ ಲಾಲ್ ಮತ್ತು ಪ್ರಿಯದರ್ಶಿನಿ ಮಟ್ಟೂ ಹತ್ಯೆ ಪ್ರಕರಣಗಳಿಗಿಂತ ಬೋಫೋರ್ಸ್ ರುಷುವತ್ತು ಪ್ರಕರಣವನ್ನು ನಿಭಾಯಿಸುವುದು ಹೆಚ್ಚು ಕಠಿಣ ಎಂದು ನ್ಯಾಯಮೂರ್ತಿ ಆರ್. ಎಸ್. ಸೋಧಿ ಅಭಿಪ್ರಾಯಪಟ್ಟರು. ಸೋಧಿ ಅವರು ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ಗುರುವಾರ ನಿವೃತ್ತಿ ಹೊಂದಲಿದ್ದಾರೆ.
ಇಡೀ ಜಗತ್ತೇ ತಮ್ಮ ಕಡೆ ವೀಕ್ಷಿಸುವಾಗ ತೀರ್ಪು ನೀಡುವುದು ಅತ್ಯಂತ ಕಷ್ಟದ ಕೆಲಸ ಎಂದು ಸೋಧಿ 2002 ಮೇ 31ರ ತಮ್ಮ ತೀರ್ಪನ್ನು ಉಲ್ಲೇಖಿಸಿ ಹೇಳಿದರು. ಸಿಬಿಐ ಆರೋಪ ಪಟ್ಟಿ ಸಲ್ಲಿಸುವ ಮುನ್ನ ಕೇಂದ್ರ ಜಾಗೃತ ಆಯೋಗದ ಪೂರ್ವಾನುಮತಿ ಪಡೆಯಲು ವಿಫಲವಾಗಿದೆಯೆಂಬ ಕಾರಣದ ಮೇಲೆ ಹಿಂದೂಜಾ ಸೋದರರ ವಿರುದ್ಧ ಆರೋಪ ಪಟ್ಟಿಯನ್ನು ಸೋಧಿ ರದ್ದುಮಾಡಿದ್ದರು.
ಹಿಂದೂಜಾ ಸೋದರರು 1986ರ ರಕ್ಷಣಾ ಒಪ್ಪಂದದಲ್ಲಿ ಭಾರತ ಸರ್ಕಾರದಿಂದ ರುಷುವತ್ತು ಪಡೆದಿದ್ದರೆಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು. ವಿವಿಧ ಭಾಗಗಳಿಂದ ಸಿಬಿಐ ಸಂಗ್ರಹಿಸಿದ ಬೃಹತ್ ದಾಖಲೆಗಳ ಪರಿಶೀಲನೆ ಕಷ್ಟವಾಗುತ್ತಿದೆ. ಕೆಲವು ಸ್ವೀಡನ್‌ನಿಂದ ಬಂದಿವೆ ಎಂದು ಅವರು ನುಡಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸುವಾಗ ತಾವು ನ್ಯಾಯಾಧೀಶ ಸ್ಥಾನಕ್ಕಿಂತ ಹೆಚ್ಚಾಗಿ ಮಾನವೀಯ ದೃಷ್ಟಿಯಿಂದ ನೋಡಿದ್ದಾಗಿ ಮಾಧ್ಯಮದ ಜತೆ ಸಂವಾದದಲ್ಲಿ ಸೋಧಿ ಹೇಳಿದರು
ಕಳೆದ ಒಂದೂವರೆ ವರ್ಷದಲ್ಲಿ 6 ಪ್ರಮುಖ ಪ್ರಕರಣಗಳನ್ನು ನಿಭಾಯಿಸಿದ್ದಾಗಿ ಸೋದಿ ಹೇಳಿದರು.ನಿವೃತ್ತರಾದ ಮೇಲೆ ಕ್ರಿಮಿನಲ್ ಕಾನೂನಿನಲ್ಲಿ ಸುಪ್ರೀಂಕೋರ್ಟ್ ವಕೀಲರಾಗಿ ವೃತ್ತಿಜೀವನ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದರು.
|