ಭಾರತ-ಅಮೆರಿಕ ಪರಮಾಣು ಒಪ್ಪಂದದ ರಾಜಕೀಯ ಮತ್ತು ಮಿಲಿಟರಿ ಆಯಾಮದಿಂದ ಉಂಟಾಗುವ ಅಮೆರಿಕ ಜತೆಗಿನ ಕಾರ್ಯತಾಂತ್ರಿಕ ಮೈತ್ರಿ ಭಾರತದ ಸ್ವತಂತ್ರ ವಿದೇಶಿ ನೀತಿ ಮತ್ತು ಕಾರ್ಯನೀತಿ ಸ್ವಾಯತ್ತತೆಯನ್ನು ನಾಶ ಮಾಡುತ್ತದೆ ಎಂದು ಸಿಪಿಐ(ಎಂ) ತಿಳಿಸಿದೆ.
"ಇದು ಎರಡು ದೇಶಗಳು ಪರಮಾಣು ಶಕ್ತಿಯ ಕ್ಷೇತ್ರದಲ್ಲಿ ಒಂದು ಒಪ್ಪಂದಕ್ಕೆ ಬರುವ ಕುರಿತು ಮಾತ್ರವಲ್ಲ. ಇದು ರಾಜಕೀಯ, ಆರ್ಥಿಕ ಮತ್ತು ಸೈನಿಕ ಸಹಕಾರದ ವಿಶಾಲ ವಾಸ್ತುವಿನ ಭಾಗವಾಗಿದೆ," ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕರಾಟ್ ಹೇಳಿದ್ದಾರೆ.
ಅವರು ಸಂಸತ್ ವ್ಯವಹಾರಗಳ ಸಂಸ್ಥೆಯ ಯೋಜಿತ ಸರಣಿಯಲ್ಲಿ ಉಪನ್ಯಾಸ ನೀಡುತ್ತಾ, ಈ ಒಪ್ಪಂದದ ವಿಷಯದಲ್ಲಿ ಎಡಪಕ್ಷ ಯುಪಿಎ ಸರಕಾರದ ಜತೆ ಮುಖಾಮುಖಿಯಾಗಲು ಇಚ್ಚಿಸುವುದಿಲ್ಲವಾದರೂ, ದೇಶ ಒಂದು ಸ್ವತಂತ್ರ ವಿದೇಶಿ ನೀತಿಯನ್ನು ಅನುಸರಿಸುವುದೆಂಬ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಷರತ್ತಿಗೆ ಬದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಸ್ವತಂತ್ರ ಭಾರತದಲ್ಲಿ ವಿದೇಶಿ ನೀತಿ ವಿಚಾರವನ್ನು ಸಮಾಜದ ಎಲ್ಲಾ ವರ್ಗದವರು ಚರ್ಚಿಸಿದ್ದರಿಂದ ಸಂತೋಷವಾಗಿದೆ. ಆದರೆ ಸಂಸತ್ ಇದನ್ನು ಇನ್ನೂ ಚರ್ಚಿಸಿಲ್ಲ ಎಂಬುದು ನಾಚಿಕೆ ಗೇಡಿನ ವಿಷಯ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಬಹುತೇಕ ಸದಸ್ಯರು ಈ ಒಪ್ಪಂದ ಅನುಷ್ಠಾನದ ವಿರುದ್ಧವಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಸಂಸತ್ ಏನು ಹೇಳುತ್ತದೆ ಎಂಬುದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪರಮಾಣು ಶಕ್ತಿ ಮೇಲಿನ ಯುಪಿಎ-ಎಡಪಕ್ಷ ಸಮಿತಿ ತಮ್ಮ ಚರ್ಚೆಯನ್ನು ಮುಂದುವರಿಸ ಬಹುದು ಮತ್ತು ದೇಶದ ಸಾರ್ವಭೌಮವನ್ನು ರಕ್ಷಿಸುವ ಒಂದು ನಿರ್ಧಾರಕ್ಕೆ ಬರಲು ಸಹಕರಿಸಬೇಕು ಎಂದು ಕರಾಟ್ ತಿಳಿಸಿದ್ದಾರೆ.
|