ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ಸಿಪಿಎಂ ನಂದಿಗ್ರಾಮದ ಗ್ರಾಮಗಳನ್ನು ಪುನರ್ವಶ ಮಾಡಿಕೊಳ್ಳುವ ರೀತಿಯನ್ನು ಕಾನೂನುಬಾಹಿರ ಎಂದು ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಟೀಕಿಸಿದ್ದಾರೆ. ಏತನ್ಮಧ್ಯೆ, ರಾಜ್ಯಪಾಲರ ಪ್ರತಿಕ್ರಿಯೆ ವಿರುದ್ಧ ಸಿಪಿಎಂ ತರಾಟೆಗೆ ತೆಗೆದುಕೊಂಡಿದ್ದು, ತುರ್ತು ಸಭೆಯನ್ನು ಕರೆದಿದೆ.
ಪಶ್ಚಿಮಬಂಗಾಳ ಸರ್ಕಾರ ಮತ್ತು ಸಿಪಿಎಂ ವಿರುದ್ಧ ದೋಷಾರೋಪ ಮಾಡಿರುವ ಗಾಂಧಿ ನಂದಿಗ್ರಾಮದಲ್ಲಿ ಗ್ರಾಮಗಳ ಮರುವಶ ಮಾಡಿಕೊಳ್ಳುತ್ತಿರುವ ರೀತಿಯನ್ನು ಕಾನೂನುಬಾಹಿರ ಎಂದು ತಿಳಿಸಿದ್ದಾರೆ.
ನಂದಿಗ್ರಾಮ ಯುದ್ಧವಲಯವಾಗಿದೆ ಎನ್ನುವುದು ರಾಜ್ಯ ಗೃಹ ಕಾರ್ಯದರ್ಶಿ ನೀಡಿರುವ ನಿಖರ ವಿವರಣೆ. ಆದರೆ ತಕ್ಷಣದ ಅಥವಾ ಪರಿಣಾಮಕಾರಿ ಕ್ರಮ ಕೈಗೊಳ್ಳದೇ ಯುದ್ಧ ವಲಯದ ಅಸ್ತಿತ್ವಕ್ಕೆ ಯಾವುದೇ ಸರ್ಕಾರ ಅಥವಾ ಸಮಾಜ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಗಾಂಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಂದಿಗ್ರಾಮದ ಗ್ರಾಮಗಳನ್ನು ಪುನರ್‌ವಶ ಮಾಡಿಕೊಳ್ಳುತ್ತಿರುವ ರೀತಿಯು ಸಂಪೂರ್ಣ ಕಾನೂನುಬಾಹಿರ ಮತ್ತು ಅಸ್ವೀಕಾರಾರ್ಹ ಎಂದು ಅವರು ತಿಳಿಸಿದ್ದಾರೆ. ಕೈಗಾರಿಕೆಗಳಿಗೆ ಕೃಷಿಭೂಮಿ ಸ್ವಾಧೀನವನ್ನು ಪ್ರತಿಭಟಿಸುತ್ತಿರುವ ಭೂಮಿ ಉಚ್ಚಿದ್ ಪ್ರತಿರೋಧ ಸಮಿತಿಯ ವಿರುದ್ಧ ಸಿಪಿಎಂ ಸಮರ ಸಾರಿದ್ದು, ಗ್ರಾಮದ ಅನೇಕ ಪ್ರದೇಶಗಳನ್ನು ಬಲಾತ್ಕಾರದಿಂದ ವಶಪಡಿಸಿಕೊಂಡಿದೆ ಎಂಬ ವರದಿಗಳ ನಡುವೆ ರಾಜ್ಯಪಾಲರ ಹೇಳಿಕೆ ಹೊರಬಿದ್ದಿದೆ.
ಶುಕ್ರವಾರ ಸಂಜೆ 4 ಗಂಟೆಗೆ ಕೂಡ ಹಲವಾರು ಗುಡಿಸಲುಗಳಿಗೆ ಅಗ್ನಿಸ್ಪರ್ಶ ಮಾಡಿರುವ ಬಗ್ಗೆ ಜವಾಬ್ದಾರಿಯುತ ಜನರಿಂದ ಕರೆಗಳನ್ನು ಸ್ವೀಕರಿಸಿದ್ದಾಗಿ ರಾಜ್ಯಪಾಲರು ತಿಳಿಸಿದರು. ನಂದಿಗ್ರಾಮದ ಸ್ಥಳೀಯ ಪ್ರೌಢಶಾಲೆಯಲ್ಲಿ ಅನೇಕ ಮಂದಿ ಗ್ರಾಮಸ್ಥರು ಆಶ್ರಯ ಪಡೆದಿದ್ದು ಆಹಾರ ಮತ್ತು ವೈಯಕ್ತಿಕ ಭದ್ರತೆಯನ್ನು ಕಡೆಗಣಿಸಲಾಗಿದೆ ಎಂದು ಅವರು ನುಡಿದರು.
ನಂದಿಗ್ರಾಮಕ್ಕೆ ತೆರಳುವಾಗ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮತ್ತು ಬೆಂಬಲಿಗರ ಮೇಲೆ ದಾಳಿಯನ್ನು ಉಲ್ಲೇಖಿಸಿ, ಪಾಟ್ಕರ್ ಮತ್ತು ಅವರ ಸಹಚರರನ್ನು ನಡೆಸಿಕೊಂಡ ರೀತಿಯು ನಾಗರಿಕ ನಡವಳಿಕೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದ್ದಾರೆ.
ದೀಪಾವಳಿಯ ಸಡಗರ, ಸಂಭ್ರಮವೆಲ್ಲವೂ ನಂದಿಗ್ರಾಮದ ಹಿಂಸಾಚಾರದ ಘಟನಾವಳಿಗಳಿಂದ ನಂದಿ ಹೋಯಿತು ಎಂದು ರಾಜ್ಯಪಾಲರು ವಿಷಾದ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದ ವಿರುದ್ಧ ಸರ್ಕಾರವನ್ನು ರಾಜ್ಯಪಾಲರು ಟೀಕಿಸಿದ ದಿನವೇ ಸಿಪಿಎಂ ಧುರೀಣ ಜ್ಯೋತಿ ಬಸು ನಂದಿಗ್ರಾಮದಲ್ಲಿ ಶಾಂತಿ ಮರಳುತ್ತಿದೆ ಎಂದು ರಾಗಬದಲಾಯಿಸಿ,ಗ್ರಾಮದಲ್ಲಿ ಸರ್ವಪಕ್ಷಗಳ ಸಭೆ ಕರೆಯುವ ಅಗತ್ಯವಿಲ್ಲ ಎಂದು ತಿಳಿಸಿದ್ದು ಕಾಕತಾಳೀಯವಾಗಿದೆ.
|