ಹಿಂಸಾಚಾರಪೀಡಿತ ನಂದಿಗ್ರಾಮದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಶನಿವಾರ 48 ಗಂಟೆಗಳ ಉಪವಾಸ ನಿರಶನ ಆರಂಭಿಸಿದ್ದಾರೆ.
ಕಲಾವಿದರು ಮತ್ತು ವಿವಿಧ ಸಾಮಾಜಿಕ ವೇದಿಕೆಗಳ ಪ್ರತಿನಿಧಿಗಳು ಪಾಟ್ಕರ್ ಜತೆಗೂಡಿದ್ದು, ನಂದಿಗ್ರಾಮದಿಂದ ಸಿಪಿಎಂನ ಎಲ್ಲ ವರ್ಗಗಳು ಹಿಂದೆಗೆಯಬೇಕೆಂದು ಅವರು ಕರೆನೀಡಿದ್ದಾರೆ.
ಪಾಟ್ಕರ್ ಗುರುವಾರ ನಂದಿಗ್ರಾಮಕ್ಕೆ ತೆರಳುತ್ತಿದ್ದಾಗ ಅವರ ವಾಹನದ ಮೇಲೆ ಸಿಪಿಎಂ ಬೆಂಬಲಿಗರು ದಾಳಿ ನಡೆಸಿದ್ದರು. ಈ ದಾಳಿಯ ವಿರುದ್ಧ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಭೇಟಿ ಮಾಡಿದ ಪಾಟ್ಕರ್ ನಂದಿಗ್ರಾಮಕ್ಕೆ ಸಿಪಿಎಂ ಕಾರ್ಯಕರ್ತರ ಮುತ್ತಿಗೆ ಮತ್ತು ಹೊರಗಿನವರ ಪ್ರವೇಶ ತಡೆಯಲು ತಕ್ಷಣವೇ ಮಧ್ಯಪ್ರವೇಶ ಮಾಡಬೇಕೆಂದು ಮನವಿಪತ್ರ ಸಲ್ಲಿಸಿದ್ದರು.
ಪೊಲೀಸರು ತಾರತಮ್ಯದಿಂದ ವರ್ತಿಸಿದ್ದಾರೆಂದು ಪಾಟ್ಕರ್ ಆರೋಪಿಸಿದ್ದಾರೆ. ಯಾವುದೇ ರಾಜಕೀಯ ಬ್ಯಾನರ್‌ರಹಿತವಾಗಿ ನ.14ರಂದು ಸಾಮೂಹಿಕ ರಾಲಿಗೆ ಅವರು ಕರೆನೀಡಿದ್ದಾರೆ. ಏತನ್ಮಧ್ಯೆ, ಸಿಪಿಎಂ ರಾಜ್ಯ ಸಮಿತಿಯು ನಂದಿಗ್ರಾಮದ ಹಿಂಸಾಚಾರದ ಬಗ್ಗೆ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಹೇಳಿಕೆ ಬಗ್ಗೆ ಸಭೆ ನಡೆಸಲು ತೀರ್ಮಾನಿಸಿದೆ.
|