ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರ ಸ್ಥಾಪನೆಗೆ ವೇದಿಕೆ ಸಜ್ಜಾಗುತ್ತಿರುವಂತೆಯೇ, ಬಿ.ಎಸ್.ಯಡ್ಯೂರಪ್ಪ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಲು ಪಕ್ಷದ ಪ್ರಮುಖ ನಾಯಕರ ದಂಡೇ ಸೋಮವಾರ ಬೆಂಗಳೂರಿಗೆ ಧಾವಿಸಲಿದೆ.
ಲೋಕಸಭೆಯ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ಮುಖಂಡರಾದ ಮುರಳಿ ಮನೋಹರ ಜೋಷಿ ಮತ್ತು ಯಶವಂತ ಸಿನ್ಹಾ ಮತ್ತಿತರ ಪದಾಧಿಕಾರಿಗಳು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ, ವಿಧಾನಸೌಧದಲ್ಲಿ ನಡೆಯುವ ಅಧಿಕಾರಗ್ರಹಣ ಸಮಾರಂಭವನ್ನು ವೀಕ್ಷಿಸಲಿದ್ದಾರೆ.
224 ಸದಸ್ಯಬಲದ ವಿಧಾನಸಭೆಯಲ್ಲಿ 79 ಸದಸ್ಯರೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡ ಅನ್ವಯ ಇದೀಗ ಅಧಿಕಾರಕ್ಕೇರುತ್ತಿದೆ. ಮುರಿದು ಬಿದ್ದ ಮೈತ್ರಿ ಮತ್ತೆ ಒಂದುಗೂಡಿದ್ದು, ಕರ್ನಾಟಕ ರಾಜಕೀಯದ ಹೊಸ ಅಧ್ಯಾಯವೊಂದು ಆರಂಭವಾಗಲಿದೆ.
|