ವಿಶ್ವದ ನಂಬರ್ ಒನ್ ರೈಲು ಇಲಾಖೆ ಎಂಬ ಖ್ಯಾತಿಗೆ ಒಳಗಾಗಿರುವ ಭಾರತೀಯ ರೈಲ್ವೆ ಇಲಾಖೆ, ಮುಂಬರುವ ದಿನಗಳಲ್ಲಿ ದೇಶಾದ್ಯಂತ ಒಟ್ಟು 7500 ರೈಲು ನಿಲ್ದಾಣಗಳನ್ನು ನಿರ್ಮಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆಯ ಸಚಿವ ಲಾಲು ಪ್ರಸಾದ್ ಯಾದವ್ ತಿಳಿಸಿದ್ದಾರೆ.
ಮೇಲ್ದರ್ಜೆಗೇರಿಸಿರುವ ಫರ್ರುಖಾಬಾದ್-ಕಾಸಗಂಜ್ ರೈಲು ಹಳಿಯನ್ನು ಸೇವೆಗೆ ಸಮರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಪ್ರಮುಖ ರೈಲು ಕ್ರಾಸಿಂಗ್‌ಗಳ ಮೇಲೆ ಪುಟ್‌ಬ್ರಿಡ್ಜ್ ಕಟ್ಟಲು ಇಲಾಖೆ ತೀರ್ಮಾನಿಸಿದೆ ಎಂದು ಹೇಳಿದರು
ದಿನದಿಂದ ದಿನಕ್ಕೆ ರೈಲು ಪ್ರಯಾಣಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ 7500 ರೈಲು ನಿಲ್ದಾಣಗಳನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ಸುದ್ದಿಗಾರರಿಗೆ ವಿವರ ನೀಡಿದರು.
7500 ರಲ್ಲಿ ಈಗಾಗಲೇ ಉತ್ತರ ಭಾರತದಲ್ಲಿ 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 44 ರೈಲಿ ನಿಲ್ದಾಣಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ ಯಾದವ್, ರಾಯ್‌ಬರೇಲಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರೈಲು ಡಬ್ಬಿ ನಿರ್ಮಾಣ ಕಾರ್ಖಾನೆಯ ಎಲ್ಲಾ ಕಾರ್ಯಗಳು ಪೂರ್ಣಗೊಂಡಿವೆ ಎಂದು ಹೇಳಿದರು.
ಈ ಯೋಜನೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ಸ್ಥಳಾವಕಾಶವನ್ನು ಬೇಗನೆ ನೀಡಬೇಕೆಂದು ಲಾಲು ಪ್ರಸಾದ್ ಯಾದವ್ ಮಾಯಾವತಿಯವರಲ್ಲಿ ಮನವಿ ಮಾಡಿಕೊಂಡರು.
|