ರಾಷ್ಟ್ರದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ 118ನೇ ಜನ್ಮದಿನವಾದ ಬುಧವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾರತದ ಆಧುನಿಕ ಶಿಲ್ಪಿಗೆ ಗೌರವಾರ್ಪಣೆ ಮಾಡಿದರು. ನೆಹರು ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಿರುವ ಇಂದು ಬಿಳಿ ಖಾದಿ ಉಡುಪು ಧರಿಸಿದ್ದ ಮಕ್ಕಳು ಅಪಾರ ಸಂಖ್ಯೆಯಲ್ಲಿ ನೆಹರು ಸ್ಮಾರಕ ಶಾಂತಿವನಕ್ಕೆ ಭೇಟಿ ನೀಡಿ ಚಾಚಾ ನೆಹರು ಅವರಿಗೆ ನಮನ ಸಲ್ಲಿಸಿದರು.
ಪ್ರತಿಭಾ ಪಾಟೀಲ್ ಅವರಲ್ಲದೇ ಪ್ರಧಾನಿ ಮನಮೋಹನ ಸಿಂಗ್, ಗೃಹಸಚಿವ ಶಿವರಾಜ್ ಪಾಟೀಲ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೆಹರು ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು.
ಶಾಲಾ ಮಕ್ಕಳು ಕೈಯಲ್ಲಿ ಹಿಡಿದಿದ್ದ ತ್ರಿವರ್ಣ ಬೆಲೂನುಗಳನ್ನು ಗಣ್ಯರು ಗಾಳಿಯಲ್ಲಿ ಬಿಟ್ಟಾಗ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ರಾಷ್ಟ್ರದ ಆಧುನಿಕ ಶಿಲ್ಪಿ ಎಂದು ವರ್ಣಿತರಾದ ನೆಹರು ಉತ್ತಮ ವಾಕ್ಪಟು, ಸಾಹಿತ್ಯಪಟು ಮತ್ತು ಬಹುಮುಖ ವ್ಯಕ್ತಿತ್ವ ಹೊಂದಿದ್ದರು.
ನೆಹರು ಅವರು ಆಗಸ್ಟ್ 14-15ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ "ಟ್ರಿಸ್ಟ್ ವಿತ್ ಡೆಸ್ಟಿನಿ" ಕುರಿತ ಅವರ ಭಾಷಣ ಚಿರಸ್ಮರಣೀಯವಾಗಿದೆ. ಅವರು ಬರೆದ ಪುಸ್ತಕ ಡಿಸ್ಕವರಿ ಆಫ್ ಇಂಡಿಯಾ ಇಂದಿಗೂ ಕೂಡ ಉತ್ತಮ ಮಾರಾಟ ಪ್ರತಿಯೆನಿಸಿದೆ.
|