ಆರ್ಥಿಕ ಬೆಳವಣಿಗೆಯ ಅನುಕೂಲಗಳು ರಾಷ್ಟ್ರಾದ್ಯಂತ ಹಂಚಿಕೆಯಾಗಿ ಸಮಾಜದ ದುರ್ಬಲ ವರ್ಗಗಳಿಗೆ ಮುಟ್ಟಬೇಕು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬುಧವಾರ ತಿಳಿಸಿದರು. 27ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳವನ್ನು ಉದ್ಘಾಟಿಸಿದ ಅವರು ಭಾರತದ ಆರ್ಥಿಕತೆ ವಿಶೇಷವಾಗಿ ವಾಹನಗಳು ಮತ್ತು ಔಷಧಿ ಕೈಗಾರಿಕೆ ವಲಯಗಳಲ್ಲಿ ಕ್ಷಿಪ್ರಗತಿಯ ಪ್ರಗತಿ ದರವನ್ನು ಕಾಣುತ್ತಿದೆಯೆಂದು ಹೇಳಿದರು.
ಈ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದು ನಮ್ಮ ಗುರಿಯಾಗಬೇಕು ಎಂದು ಹೇಳಿದ ಅವರು ಸೌಲಭ್ಯವಂಚಿತ ಮತ್ತು ದಮನಿತ ವರ್ಗಗಳಿಗೂ ಅಭಿವೃದ್ಧಿಯ ಫಲ ಸಿಗಬೇಕು ಎಂದು ನುಡಿದರು.
ವ್ಯಾಪಾರ ಮೇಳದ ಮುಖ್ಯವಿಷಯವಾದ "ಸಂಸ್ಕರಿತ ಆಹಾರ ಮತ್ತು ಕೃಷಿ ಕೈಗಾರಿಕೆಗಳ" ಬಗ್ಗೆ ಪ್ರತಿಕ್ರಿಯಿಸಿದ ಅವರು ಭಾರತದ ಕೃಷಿ ರಫ್ತು ಕಳೆದ ವರ್ಷಕ್ಕಿಂತ ಶೇ.20ರಷ್ಟು ಹೆಚ್ಚುವ ಮೂಲಕ ಕೃಷಿ ಸನ್ನಿವೇಶ ಅಂತಿಮವಾಗಿ ಏರುಮುಖದತ್ತ ಸಾಗಿದೆ ಎಂದು ಅವರು ನುಡಿದರು.
ಆದಾಗ್ಯೂ, ಭಾರತವು ವಿಶ್ವದ ಅಗ್ರಮಾನ್ಯ ಆಹಾರ ಉತ್ಪಾದಕ ರಾಷ್ಟ್ರವಾದರೂ ಜಾಗತಿಕ ಸಂಸ್ಕರಿತ ಆಹಾರ ಉತ್ಪಾದನೆಗೆ ಕೇವಲ ಶೇ.2ರ ಕೊಡುಗೆ ನೀಡಿರುವ ಬಗ್ಗೆ ಪ್ರತಿಭಾಪಾಟೀಲ್ ವಿಷಾದಿಸಿದರು.
ಆಹಾರ ಸಂಸ್ಕರಣೆಯನ್ನು ಆದ್ಯತಾ ವಲಯವಾಗಿ ಭಾರತ ಘೋಷಿಸಿರುವ ಬಗ್ಗೆ ಗಮನ ಸೆಳೆದ ಅವರು, ಕೃಷಿ ಉತ್ಪಾದನಾ ಕೇಂದ್ರಗಳಿಗೆ ಸಮೀಪ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆಹಾರ ಸಂಸ್ಕರಣೆ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ನುಡಿದರು.
|