ಗುರುವಾರದಿಂದ ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಂದಿಗ್ರಾಮದ ಹಿಂಸಾಕಾಂಡದ ವಿಷಯ ಕಾವೇರಿದ ಚರ್ಚೆಗೆ ನಾಂದಿಯಾಗುತ್ತದೆಂದು ನಿರೀಕ್ಷಿಸಲಾಗಿದೆ. ನಂದಿಗ್ರಾಮದ ವಿಷಯವಾಗಿ ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ತುದಿಗಾಲಲ್ಲಿ ನಿಂತಿವೆ.
ನಂದಿಗ್ರಾಮದ ವಿಷಯವನ್ನು ತುರ್ತಾಗಿ ಚರ್ಚಿಸುವಂತೆ ಒತ್ತಾಯಿಸುವ ಸಲುವಾಗಿ ನ.16ರಂದು ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸುವಂತೆ ಕೋರಿ ಬಿಜೆಪಿ ನೋಟೀಸ್ ನೀಡಿದೆ. ಪರಮಾಣು ಒಪ್ಪಂದ,ರಾಮ ಸೇತು, ಚಿಲ್ಲರೆ ವಲಯದಲ್ಲಿ ವಿದೇಶಿ ಹೂಡಿಕೆ, ಬಂಡವಾಳ ಪೇಟೆ ಮೇಲೆ ಭಯೋತ್ಪಾದಕರ ಪ್ರಭಾವ ಮತ್ತು ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಮುಂತಾದ ವಿಷಯಗಳನ್ನು ಬತ್ತಳಿಕೆಯಿಂದ ಪ್ರಯೋಗಿಸಲು ಬಿಜೆಪಿ ಸಜ್ಜಾಗಿದೆ.
ಲೋಕಸಭೆ ಸ್ಪೀಕರ್ ಬುಧವಾರ ಕರೆದ ಸರ್ವಪಕ್ಷ ಸಭೆಯಲ್ಲಿ ಅಧಿವೇಶನವು ಸುಗಮವಾಗಿ ಸಾಗುತ್ತದೆಂದು ಸೋಮನಾಥ ಚಟರ್ಜಿ ಇಂಗಿತ ವ್ಯಕ್ತಪಡಿಸಿದ್ದಾರೆ.ಅಧಿವೇಶನದ ಆರಂಭದ ದಿನದಂದು ಲೋಕಸಭೆಯಲ್ಲಿ ವಿಜಯ್ ಖಂಡೇಲ್‌ವಾಲ್ ನಿಧನಕ್ಕೆ ಮತ್ತು ರಾಜ್ಯಸಭೆಯಲ್ಲಿ ಜನಾ ಕೃಷ್ಣಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡುವ ನಿರೀಕ್ಷೆಯಿದೆ.
|