ಸಂಸತ್ತಿನ ಚಳಿಗಾಲ ಅಧಿವೇಶನ ಇಂದು ಆರಂಭವಾಗುತ್ತಿದ್ದು, ಅಧಿವೇಶನದಲ್ಲಿ ನಂದಿಗ್ರಾಮ ಹಿಂಸಾಚಾರ ವಿಷಯವು ಭಾರೀ ಕೋಲಾಹಲ ಸೃಷ್ಟಿಸುವ ನಿರೀಕ್ಷೆ ಇದೆ. ಇದರೊಂದಿಗೆ ಭಾರತ-ಅಮೆರಿಕ ಪರಮಾಣು ಒಪ್ಪಂದವು ಕೂಡ ಎಡಪಕ್ಷಗಳು ಮತ್ತು ಯುಪಿಎ ಸರಕಾರದ ಮಧ್ಯೆ ಬಿರುಸಿನ ಚರ್ಚೆಗೆ ಕಾರಣವಾಗಲಿದೆ.
ನಂದಿಗ್ರಾಮ ವಿಷಯ ಎತ್ತಿದ ತಕ್ಷಣವೇ ಸದನದಲ್ಲಿ ಕೋಲಾಹಲ ಸೃಷ್ಟಿಯಾಗುವುದು ಖಂಡಿತ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಪಶ್ಚಿಮ ಬಂಗಾಳದ ಎಡರಂಗ ಸರಕಾರಕ್ಕೆ ಬಿಸಿ ಮುಟ್ಟಿಸುವ ಯಾವುದೇ ಅವಕಾಶವನ್ನೂ ಕಳೆದುಕೊಳ್ಳದಿರಲು ಗಟ್ಟಿ ಮನಸ್ಸು ಮಾಡಿವೆ.
ಇಂದು ದಿವಂಗತ ಸಂಸದರಾದ ವಿಜಯ್ ಖಂಡೇಲ್‌ವಾಲಾ ಮತ್ತು ಜನಾ ಕೃಷ್ಣಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂಸತ್ ಕಲಾಪವನ್ನು ನಾಳೆಗೆ ಮುಂದೂಡಲಾಗುತ್ತದೆ. ಶುಕ್ರವಾರ ನೈಜ ಅಧಿವೇಶನ ಆರಂಭವಾಗಲಿದ್ದು, ಅಂದು ಪ್ರಶ್ನಾವೇಳೆಯನ್ನು ಅಮಾನತುಪಡಿಸಿ, ಅತ್ಯಂತ ಪ್ರಮುಖವಾದ ನಂದಿಗ್ರಾಮ ಹಿಂಸಾಚಾರ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಬಿಜೆಪಿ ಈಗಾಗಲೇ ಸ್ಪೀಕರ್‌ಗೆ ನೋಟಿಸ್ ಕಳುಹಿಸಿದೆ.
ಇದಲ್ಲದೆ, ಪರಮಾಣು ಒಪ್ಪಂದ, ರಾಮ ಸೇತು, ಚಿಲ್ಲರೆ ಕ್ಷೇತ್ರದಲ್ಲಿ ವಿದೇಶೀ ನೇರ ಪಬಂಡವಾಳ, ಬಂಡವಾಳ ಮಾರುಕಟ್ಟೆ ಮೇಲೆ ಭಯೋತ್ಪಾದಕರ ಹಿಡಿತ ಮತ್ತು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಮುಂತಾದ ವಿಚಾರಗಳು ಡಿಸೆಂಬರ್ 7ರಂದು ಮುಕ್ತಾಯಗೊಳ್ಳಲಿರುವ ಅಧಿವೇಶನದಲ್ಲಿ ಪ್ರಧಾನವಾಗಿ ಚರ್ಚೆಯಾಗಲಿದೆ.
|