ದಿಬ್ಬಣ ಸಮೇತ ತನ್ನ ಪ್ರಿಯಕರನ ಮನೆಗೆ ತೆರಳಿದ ಮಹಿಳೆಯೊಬ್ಬಳು, ಸಂಪ್ರದಾಯಬದ್ಧವಾಗಿ ಮದುವೆಯಾಗುವಂತೆ ಒತ್ತಾಯಿಸಿದ ಸಿನಿಮೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ರಜನಿ ಎಂಬ ಹೆಸರಿನ 30 ವರ್ಷ ಪ್ರಾಯದ ಈ ಮಹಿಳೆಯು, ಪುನ್ನುಗಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾರ್ ರಾಮ್ಗರ್‌ನ ಪುರಾನಿ ಬಜಾರ್ ಏರಿಯಾದಲ್ಲಿ ಅರಣ್ಯ ವಿಭಾಗದಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರ ಶರ್ಮಾ ಮನೆಗೆ ವಾದ್ಯಗಳನ್ನೊಳಗೊಂಡಂತೆ ಸುಮಾರು 50 ಮಂದಿಯನ್ನೊಳಗೊಂಡ ದಿಬ್ಬಣದೊಂದಿಗೆ ತೆರಳಿದ್ದರು.
ರಜನಿಯ ಹೇಳಿಕೆ ಪ್ರಕಾರ, ತಾನು ವಿಧುರ ಎಂದು ಹೇಳಿಕೊಂಡು 2002ರಲ್ಲಿ ರಾಜೇಂದ್ರ ಶರ್ಮ ತನ್ನೊಂದಿಗೆ ಸಂಬಂಧ ಬೆಳೆಸಲಾರಂಭಿಸಿದ್ದರು. ನಂತರ ಅವರಿಬ್ಬರು ದೇವಸ್ಥಾನವೊಂದರಲ್ಲಿ ವಿವಾಹವಾಗಿ ನ್ಯೂಕಾಲನಿ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ಗಂಡಹೆಂಡತಿಯಾಗಿ ವಾಸಮಾಡಿಕೊಂಡಿದ್ದರು.
ತನ್ನ ಎಲ್ಲಾ ಸಂಬಂಧಿಕರನ್ನೊಳಗೊಂಡು ಸಂಪ್ರದಾಯಬದ್ಧವಾಗಿ ಮದುವೆಯಾಗುವಂತೆ ಇತ್ತೀಚೆಗೆ ನಾನು ರಾಜೇಂದ್ರ ಶರ್ಮ ಅವರನ್ನು ಒತ್ತಾಯಿಸಲು ಪ್ರಾರಂಭ ಮಾಡಿದ್ದೆ, ಆ ಬಳಿಕದಿಂದ ಶರ್ಮ ನನ್ನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು. ಸರಿಯಾಗಿ ವಿಚಾರಿಸಿದಾಗ ಶರ್ಮ ಅವರಿಗೆ ಈಗಾಗಲೇ ಮದುವೆಯಾಗಿ ಐದು ಗಂಡುಮಕ್ಕಳಿದ್ದಾರೆ ಎಂಬುದು ತಿಳಿದುಬಂತು ಎಂದು ರಜನಿ ಹೇಳಿದರು.
ತಾನು ಸಂಬಂಧಕ್ಕೆ ಅಂತ್ಯ ಹಾಡುವುದಾಗಿ ಶರ್ಮ ಬೆದರಿಸಿದಾಗ ರಜನಿ ಆತನ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಬೇರೆ ಯಾವುದೇ ದಾರಿ ಕಾಣದೆ, ವಿಧಿವತ್ತಾಗಿ ಮದುವೆಯಾಗುವಂತೆ ಒತ್ತಾಯಿಸಲು ರಜನಿ, ದಿಬ್ಬಣ ಸಮೇತರಾಗಿ ಶರ್ಮ ಅವರ ಮನೆಗೆ ತೆರಳಿದರು. ಶರ್ಮ ಅವರ ಮನೆಮುಂದೆ ಕೆಲವು ಹೊತ್ತು ಧರಣಿ ಕೂತಿದ್ದರು. ಆದರೆ ಪೊಲೀಸರ ಮಧ್ಯಸ್ಥಿಕೆ ವಹಿಸಿದ ಬಳಿಕ ಆಕೆ ಮರಳಿದರು.
ರಜನಿಗೆ ಈ ಹಿಂದೆ ಮದುವೆಯಾಗಿದ್ದು, ಒಂದು ಪುಟ್ಟ ಮಗುವಿದೆ. ಆಕೆಯ ಗಂಡ ಅವರಿಬ್ಬರನ್ನೂ ತ್ಯಜಿಸಿದ್ದ.
|