ಭಾರತದ ಬಡ ಪ್ರಜೆಯ ತೆರಿಗೆ ಹಣ ಎಲ್ಲಿ ಪೋಲಾಗುತ್ತಿದೆ ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಈಗಿನ ಅಂದರೆ 14ನೇ ಲೋಕಸಭೆಯಲ್ಲಿ ಯುಪಿಎ ಸರಕಾರದ ಮೊದಲ ಮೂರು ವರ್ಷಗಳ ಸಂಸತ್ ಅಧಿವೇಶನದ ಶೇ.26 ಭಾಗವೂ ವ್ಯರ್ಥವಾಗಿದೆ ಎಂದಿದ್ದಾರೆ ಸ್ಪೀಕರ್ ಸೋಮನಾಥ ಚಟರ್ಜಿ.
ಕಲಾಪಗಳಿಗೆ ಒಂದಿಲ್ಲೊಂದು ಕಾರಣಕ್ಕೆ ಅಡಚಣೆ ಆಗುತ್ತಿದೆ. ಕಲಾಪದ ಅವಧಿಯಲ್ಲಿ ನಿಮಿಷಕ್ಕೆ 26 ಸಾವಿರ ರೂಪಾಯಿ ಹಣವು ಖರ್ಚಾಗುತ್ತದೆ. ಇದು ಬಡ ತೆರಿಗೆದಾರನ ಹಣ. ಇದು ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಿಂದ ತಿಳಿದುಬಂದ ಅಂಶ ಎಂದಿದ್ದಾರೆ ಚಟರ್ಜಿ.
ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ 'ಸಂಸದೀಯ ಪ್ರಜಾಸತ್ತೆಯ ಸ್ಥಿತಿಗತಿ' ಎಂಬ ವಿಚಾರದ ಕುರಿತು ಮಾತನಾಡುತ್ತಿದ್ದರು.
ಈ ವರ್ಷದ ಬಜೆಟ್ ಅಧಿವೇಶನದ ವೇಳೆ ಲೋಕ ಸಭೆಯಲ್ಲಿ ಪದೇಪದೇ ಅಡಚಣೆಯಿಂದಾಗಿ ಒಟ್ಟು 73 ಗಂಟೆಗಳು (ಸುಮಾರು ಶೇ.34 ಅವಧಿ) ನಷ್ಟವಾಗಿದೆ.
ಕಳೆದ ಅಧಿವೇಶನದಲ್ಲಿ ಲೋಕ ಸಭೆಯ ಶೇ.40ರಷ್ಟು ಸಮಯ ವ್ಯರ್ಥವಾಗಿದ್ದರೆ, ರಾಜ್ಯ ಸಭೆಯ ಶೇ.49 ಸಮಯವು ಸದನಗಳ ಮುಂದೂಡಿಕೆಗಳಿಂದಾಗಿ ವ್ಯರ್ಥವಾಗಿದೆ. ಇದರ ಪರಿಣಾಮವಾಗಿ ನಿಗದಿತ 25 ಮಸೂದೆಗಳಲ್ಲಿ ಕೇವಲ 11 ಮಾತ್ರ ಅಂಗೀಕಾರಗೊಂಡಿವೆ. ಇದರಲ್ಲಿ ಸುಮಾರು ನಾಲ್ಕು ಮಸೂದೆಗಳು ಲೋಕಸಭೆಯಲ್ಲಿ ಯಾವುದೇ ಚರ್ಚೆ ನಡೆಯದೇ ಅಂಗೀಕೃತವಾಗಿವೆ ಎಂದು ಅಂಕಿ ಅಂಶಗಳನ್ನು ಚಟರ್ಜಿ ಪ್ರಸ್ತಾಪಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಯಾರೂ ಅಡ್ಡಿಪಡಿಸಬಾರದು, ಇದು ಪ್ರಮುಖ ಸಮಯವಾಗಿದ್ದು, ಮಾಹಿತಿ ಪಡೆಯಲು ಮತ್ತು ಸರಕಾರಕ್ಕೆ ಉತ್ತರದಾಯಿತ್ವವನ್ನು ಖಚಿತಪಡಿಸಲು ಸದಸ್ಯರಿಗೆ ಪ್ರಮುಖ ಸಮಯವಾಗಿದೆ ಎಂದು ಕೆಲವು ಸಮಯಗಳ ಹಿಂದೆ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಚಟರ್ಜಿ ಹೇಳಿದ್ದರು.
|