ಗುಜರಾತಿನ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಗುರುವಾರ ಆರಂಭವಾಗಿದೆ. ಡಿ.11ರಂದು 87 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಅಧಿಸೂಚನೆಗಳನ್ನು ಹೊರಡಿಸಲಾಗುವುದು. ಮೊದಲನೆ ಹಂತದಲ್ಲಿ ಸೌರಾಷ್ಟ್ರ ಮತ್ತು ಕೆಲವು ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ. ಉಳಿದ 95 ಸ್ಥಾನಗಳಿಗೆ ಡಿ.16ರಂದು ಚುನಾವಣೆ ನಡೆಯುವುದು.
ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಲು ಚುನಾವಣೆ ಆಯೋಗ ವ್ಯಾಪಕ ವ್ಯವಸ್ಥೆ ಮಾಡಿದೆ. ಇದಕ್ಕೆ ಮುನ್ನ, ಮುಖ್ಯ ಚುನಾವಣೆ ಆಯುಕ್ತ ಎನ್. ಗೋಪಾಲಸ್ವಾಮಿ, ಚುನಾವಣಾಧಿಕಾರಿಗಳಾದ ನವೀನ್ ಚಾವ್ಲಾ ಮತ್ತು ಖುರೇಶಿ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆಗಳನ್ನು ವೀಕ್ಷಿಸಿದರು.
ತೆಹಲ್ಕಾ ಕುಟುಕು ಕಾರ್ಯಾಚರಣೆ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ದೋಷಾರೋಪ ಹೊರಿಸಿದ್ದು, ಎರಡು ಹಂತದ ಚುನಾವಣೆಗೆ ಪೂರ್ವಭಾವಿಯಾಗಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಡಿ.23ರಂದು ಮತಗಳ ಎಣಿಕೆ ನಡೆಯಲಿದೆ.ಕಳೆದ ಬಾರಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 127 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಪಕ್ಷ 51 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.
|