ಪ್ರಮುಖ ಬೆಳವಣಿಗೆಯೊಂದರಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಮತ್ತು ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿಯನ್ನು ಅಪಹರಿಸಲು ಸಂಚು ಹೂಡಿದ್ದ ಜೈಷೆ ಮೊಹಮದ್ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಉತ್ತರಪ್ರದೇಶ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ ಶುಕ್ರವಾರ ಬಂಧಿಸಿದೆ. ಬಂಧಿತರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಯೋತ್ಪಾದಕರು ತಮ್ಮ ಕುತ್ಸಿತ ತಂತ್ರಗಳನ್ನು ಕಾರ್ಯರೂಪಕ್ಕೆ ತರಲು ಲಕ್ನೊಗೆ ಪ್ರವೇಶಿಸಿದ್ದಾರೆಂಬ ಗುಪ್ತಚರ ಮಾಹಿತಿಗಳು ಪೊಲೀಸರಿಗೆ ಸಿಕ್ಕಿತು ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಉತ್ತರಪ್ರದೇಶದ ಡಿಜಿಪಿ ವಿಕ್ರಮ್ ಸಿಂಗ್ ತಿಳಿಸಿದರು. ಭಾರತದ ಜೈಲುಗಳಲ್ಲಿ ಬಂಧಿತರಾಗಿರುವ 42 ಉಗ್ರಗಾಮಿಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರಲು ಅತೀಗಣ್ಯ ವ್ಯಕ್ತಿಗಳನ್ನು ಅಪಹರಿಸಲು ಭಯೋತ್ಪಾದಕರು ಯೋಜಿಸಿದ್ದರು.
ಗಣ್ಯ ವ್ಯಕ್ತಿಗಳಾದ ರಾಹುಲ್ ಗಾಂಧಿ ಮುಂತಾದವರನ್ನು ಅಪಹರಿಸಿ ಅವರನ್ನು ಒತ್ತೆಯಾಳಾಗಿರಿಸಿಕೊಂಡು ಬಂಧಿತ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸುವುದು ಅವರ ತಂತ್ರವಾಗಿತ್ತು, ಅದರ ಬಗ್ಗೆ ಹೆಚ್ಚಿನ ಗಮನ ಸೆಳೆಯಲು ಅಂತಾರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶಕ್ಕೆ ಕೂಡ ಅವರು ಇಚ್ಛಿಸಿದ್ದರು.
ಈ ಒಳಸಂಚಿನ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿ ಉಗ್ರರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದರು. ಉಗ್ರರು ತೆರಳುತ್ತಿದ್ದ ಸಾಂಟ್ರೊ ಕಾರನ್ನು ಪೊಲೀಸರು ತಡೆದಾಗ ಉಗ್ರರು ಪ್ರತಿದಾಳಿ ನಡೆಸಿದರು. ಉಭಯ ಕಡೆಗಳ ನಡುವೆ ತೀವ್ರ ಕಾಳಗ ನಡೆದ ಬಳಿಕ ಅಂತಿಮವಾಗಿ ಭಯೋತ್ಪಾದಕರನ್ನು ಬಂಧಿಸಲಾಯಿತು.
|