ನಂದಿಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಕೋಲ್ಕತಾ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸರು ವಹಿಸಿದ ಪಾತ್ರವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಸಹಜಸ್ಥಿತಿ ತರಲು ವಿಫಲವಾದ ಕಾನೂನು ಸುವ್ಯವಸ್ಥೆ ಯಂತ್ರವನ್ನು ಹಿಗ್ಗಾಮುಗ್ಗಾ ಝಾಡಿಸಿತು.
ಮಾ.14ರಂದು ನಂದಿಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮಂಡಿಸಿದ ಎಲ್ಲ ವಾದಗಳನ್ನು ಕೋರ್ಟ್ ತಳ್ಳಿಹಾಕಿ, ನಂದಿಗ್ರಾಮದ ಹಿಂಸಾಚಾರದ ಬಗ್ಗೆ ತನಿಖೆ ಮುಂದುವರಿಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿತು.
ಮಾ.14ರಂದು ನಡೆದ ಗುಂಡಿನದಾಳಿ ಸಂಪೂರ್ಣ ಅಸಂವಿಧಾನಿಕವಾಗಿದ್ದು, ಅಲ್ಲಿನ ಪರಿಸ್ಥಿತಿ ಆಘಾತಕಾರಿಯಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿತು. ಪೊಲೀಸರು ಸ್ವಯಂ ಸಂಯಮ ತೋರಿಸಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಕೋರ್ಟ್ ಹೇಳಿದೆ.
ನಂದಿಗ್ರಾಮದ ಹಿಂಸಾಚಾರದ ಘಟನೆಯಲ್ಲಿ ಮೃತಪಟ್ಟವರ ಸಮೀಪದ ಬಂಧುಗಳಿಗೆ ತಲಾ 5 ಲಕ್ಷ ರೂ.,ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ 2 ಲಕ್ಷ ರೂ. ಮತ್ತು ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂ. ನೀಡುವಂತೆ ಕೋರ್ಟ್ ರಾಜ್ಯಸರ್ಕಾರಕ್ಕೆ ಆದೇಶಿಸುವ ಮೂಲಕ ಹಿಂಸಾಚಾರಪೀಡಿತರು ನಿಟ್ಟುಸಿರು ಬಿಡುವಂತೆ ಮಾಡಿದೆ.
|