ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಐಸಿಸಿ ಅಧಿವೇಶನ ಇಂದು ಆರಂಭ
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹತ್ವದ ಅಧಿವೇಶನ ಇಂದು ರಾಜಧಾನಿ ನವದೆಹಲಿಯಲ್ಲಿ ಜರುಗಲಿದ್ದು, ಎಐಸಿಸಿ ಯುವ ನಾಯಕ ಮತ್ತು ಭಾವಿ ಪ್ರಧಾನಿ ಎಂದೇ ಕಾಂಗ್ರೆಸ್ ವಲಯದಲ್ಲಿ ಬಿಂಬಿತವಾಗಿರುವ ರಾಹುಲ್‌ ಗಾಂಧಿಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ರಾಹುಲ್ ಈ ಅಧಿವೇಶನದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಕಳೆದ ಆರು ತಿಂಗಳುಗಳಿಂದ ಎರಡು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಯ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಈ ಚಕ್ರವ್ಯೂಹವನ್ನು ಬೇಧಿಸಿ ಹೊರಬರುವ ಬಗೆ ಹೇಗೆಂಬುದನ್ನು ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎಂದು ಕಾಂಗ್ರಸ್ ನಿಕಟ ಮೂಲಗಳು ತಿಳಿಸಿವೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ, ಅಮೆರಿಕ ಜೊತೆ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಮತ್ತು ಸೇತು ಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ವಿರೋಧಪಕ್ಷಗಳಿಂದ ಇನ್ನಿಲ್ಲದ ಉಪಟಳವನ್ನು ಅನುಭವಿಸಿದ್ದು, ಈ ಸಮಸ್ಯೆಗಳ ಕುರಿತು ಶನಿವಾರದ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಇತ್ತೀಚೆಗಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿರುವ ಯುವ ಸಂಸದ ರಾಹುಲ್ ಗಾಂಧಿಯವರತ್ತ ಎಲ್ಲರ ಚಿತ್ತ ನೆಟ್ಟಿದ್ದು, ಈ ಸಭೆಯಲ್ಲಿ ಅವರು ಯಾವ ನಿರ್ಧಾರಗಳನ್ನು ಪ್ರಕಟಿಸುತ್ತಾರೆ ಎನ್ನುವ ಕುತೂಹಲ ಎಲ್ಲ ಕಾಂಗ್ರೆಸ್ಸಿಗರಲ್ಲಿ ಮನೆ ಮಾಡಿದೆ.

ಏತನ್ಮಧ್ಯೆ, ಶುಕ್ರವಾರ ಸಂಜೆಯಷ್ಟೇ ಅಘಾತಕಾರಿ ಸುದ್ದಿಯೊಂದು ಕಾಂಗ್ರೆಸ್ ಪಾಳೆಯದಲ್ಲಿ ಬರಸಿಡಿಲಿನಂತೆ ಬಂದೆರಗಿದ್ದು, ರಾಹುಲ್ ಅಪಹರಣಕ್ಕೆ ಪಾಕ್ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಉಗ್ರರು ಹೊಂಚು ಹಾಕಿದ್ದರು. ಆದರೆ, ಉತ್ತರ ಪ್ರದೇಶ ಪೊಲೀಸರು ಈ ಸಂಚನ್ನು ವಿಫಲಗೊಳಿಸಿ ಉಗ್ರರನ್ನು ಬಂಧಿಸಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ನೆಮ್ಮದಿಯನ್ನು ತಂದಿದೆ.

ಕಾಂಗ್ರೆಸಿಗರು ವ್ಯಕ್ತಪಡಿಸಿರುವ ಇಚ್ಛೆಯಂತೆ ಯುವನಾಯಕ ರಾಹುಲ್ ಗಾಂಧಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿರುವ ಬಳಿಕ ನಡೆಯುತ್ತಿರುವ ಪ್ರಥಮ ಅಧಿವೇಶನ ಇದಾಗಿದ್ದು, ಅತ್ಯಂತ ಉತ್ಸಾಹಕಾರಿಯಾಗಲಿದೆ.

ಈ ಅಧಿವೇಶನವು ಗುಜರಾತ್ ಚುನಾವಣೆಯ ಪೂರ್ವಭಾವಿಯಾಗಿ ನಡೆಯುತ್ತಿದ್ದು, ಕೇಸರಿ ಪಕ್ಷದ ಮೇಲೆ ಅದರಲ್ಲೂ ವಿವಾದಾತ್ಮಕ ಮುಖ್ಯಮಂತ್ರಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಯುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.
ಮತ್ತಷ್ಟು
ಸಿಪಿಐ(ಎಂ) ವಿರೋಧಿ ಸಂಘಟನೆಗೆ ಕರೆ
ಐಎಇಎ ಸಂಪರ್ಕಿಸಲು ಸರ್ಕಾರ ನಿರ್ಧಾರ
ಅಲ್ಲಾ ಹೆಸರಿನಲ್ಲಿ ಪ್ರಮಾಣ: ಸುಪ್ರೀಂಕೋರ್ಟ್ ಅಸ್ತು
ಶ್ರದ್ಧಾಂಜಲಿ: ಕಲಾಪ ನಾಳೆಗೆ ಮುಂದೂಡಿಕೆ
ನಂದಿಗ್ರಾಮ: ಸಂಸತ್ತಿನಲ್ಲಿ ಪ್ರಸ್ತಾಪಕ್ಕೆ ಅವಕಾಶವಿಲ್ಲ
ನಂದಿಗ್ರಾಮ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ