ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಹುಲ್ ಅಪಹರಣಕ್ಕೆ ಯೋಜನೆ: ಉಗ್ರರ ತಪ್ಪೊಪ್ಪಿಗೆ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಅಪಹರಿಸಲು ಲಕ್ನೊದಲ್ಲಿ ಬಂಧಿತರಾದ ಮೂವರು ಜೈಷೆ ಮೊಹಮದ್ ಉಗ್ರಗಾಮಿಗಳು ಯೋಜಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಯುವ ಸಂಸದನನ್ನು ಅಪಹರಿಸಲು ಯೋಜಿಸಿರುವ ಬಗ್ಗೆ ಉಗ್ರರ ತಪ್ಪೊಪ್ಪಿಗೆಯನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದೆ.

ಅತಿ ಗಣ್ಯ ರಾಜಕಾರಣಿಯಾದ ರಾಹುಲ್ ಗಾಂಧಿಯನ್ನು ಒತ್ತೆಯಾಳಾಗಿರಿಸಲು ಅಥವಾ ಅವರನ್ನು ಅಪಹರಿಸುವ ದೊಡ್ಡ ಗುರಿಯನ್ನು ಇಟ್ಟುಕೊಂಡು ಉಗ್ರಗಾಮಿಗಳು ತರಬೇತಿ ಪಡೆದಿದ್ದರೆಂದು ಉತ್ತರಪ್ರದೇಶ ವಿಶೇಷ ಕಾರ್ಯಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟೆಲಿವಿಷನ್ ಚಾನೆಲ್‌ಗಳು ಪ್ರಸಾರ ಮಾಡಿದ ವಿಡಿಯೊ ಟೇಪ್‌ಗಳಲ್ಲಿ ನಮ್ಮ ಯೋಜನೆ ರಾಹುಲ್ ಗಾಂಧಿಯನ್ನು ಅಪಹರಿಸುವುದಾಗಿತ್ತು ಎಂದು ಉಗ್ರಗಾಮಿಯೊಬ್ಬ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದನ್ನು ತೋರಿಸಲಾಗಿದೆ. 42 ಕೈದಿಗಳ ಬಿಡುಗಡೆ ಸಲುವಾಗಿ ಪಾಕಿಸ್ತಾನದಲ್ಲಿರುವ ಜನರ ಆದೇಶದ ಮೇಲೆ ತಾವು ಅಪಹರಣಕ್ಕೆ ಯೋಜಿಸಿದ್ದೆವು ಎಂದು ಉಗ್ರಗಾಮಿಗಳು ಹೇಳಿಕೆ ನೀಡಿದ್ದಾರೆ.

ನಮಗೆ 42 ಕೈದಿಗಳ ಪಟ್ಟಿಯನ್ನು ನೀಡಿ ಅವನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು ಎಂದು ಉಗ್ರಗಾಮಿಯೊಬ್ಬ ಹೇಳಿದ್ದಾನೆ. ಅವರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂದೂ ಅವನು ಬಾಯಿಬಿಟ್ಟಿದ್ದಾನೆ.

ಗ್ರೆನೇಡ್‌ಗಳನ್ನು ಎಸೆಯುವುದರ ಜತೆಗೆ ಗುಂಡುಹಾರಿಸುವ ಮೂಲಕ ಕಾಂಗ್ರೆಸ್ ಸಂಸದನನ್ನು ಅಪಹರಿಸುವುದು ತಮ್ಮ ಯೋಜನೆಯಾಗಿತ್ತು ಎಂದು ಅವನು ಹೇಳಿದ್ದಾನೆ.
ಮತ್ತಷ್ಟು
ಚತ್ತೀಸ್‌ಗಢ್: ಭೂಮಿ ವಶ ಟಾಟಾ ವಿರುದ್ಧ ಪ್ರತಿಭಟನೆ
ಎಐಸಿಸಿ ಅಧಿವೇಶನ ಇಂದು ಆರಂಭ
ಸಿಪಿಐ(ಎಂ) ವಿರೋಧಿ ಸಂಘಟನೆಗೆ ಕರೆ
ಐಎಇಎ ಸಂಪರ್ಕಿಸಲು ಸರ್ಕಾರ ನಿರ್ಧಾರ
ಅಲ್ಲಾ ಹೆಸರಿನಲ್ಲಿ ಪ್ರಮಾಣ: ಸುಪ್ರೀಂಕೋರ್ಟ್ ಅಸ್ತು
ಶ್ರದ್ಧಾಂಜಲಿ: ಕಲಾಪ ನಾಳೆಗೆ ಮುಂದೂಡಿಕೆ