ನಂದಿಗ್ರಾಮದಲ್ಲಿ ಸಿಪಿಎಂ ಕಾರ್ಯಕರ್ತರಿಂದ ಗ್ರಾಮಸ್ಥರ ಮೇಲೆ ದೌರ್ಜನ್ಯ ಪ್ರಕರಣಗಳು ಮತ್ತಷ್ಟು ಬೆಳಕಿಗೆ ಬರುತ್ತಿದ್ದು, ನಂದಿಗ್ರಾಮದ ಅನೇಕ ಮಂದಿ ನಿರಾಶ್ರಿತ ಮಹಿಳೆಯರು ತಮ್ಮ ಮೇಲೆ ಅಮಾನವೀಯ ಅತ್ಯಾಚಾರ ನಡೆಸಲಾಗಿದೆಯೆಂದು ದೃಡಪಡಿಸಿದ್ದಾರೆ. ಅವರ ಕಣ್ಣುಗಳಲ್ಲಿ ಭಯದ ಛಾಯೆ ಮಡುಗಟ್ಟಿದ್ದವು. 40 ವರ್ಷ ಪ್ರಾಯದ ಅಕ್ರೇಜಾ ಬಿವಿಗೆ ಮನೆಗೆ ಹಿಂತಿರುಗಲು ಇಷ್ಟವಿಲ್ಲ.
ಕಳೆದ ಭಾನುವಾರ, ಸಿಪಿಎಂ ಕಾರ್ಯಕರ್ತರು ನಂದಿಗ್ರಾಮವನ್ನು ಮರುವಶಕ್ಕೆ ತೆಗೆದುಕೊಂಡಾಗ, ಸುಮಾರು ಪಕ್ಷದ ನೂರು ಕಾರ್ಯಕರ್ತರು ಅಕ್ರೇಜಾ ಮನೆಗೆ ನುಗ್ಗಿ ಲೂಟಿ ಮಾಡಿದರು ಮತ್ತು ಆಕೆಯ ಮೇಲೆ ಹಾಗೂ ಆಕೆಯ ಪುತ್ರಿಯರ ಮೇಲೆ ಅತ್ಯಚಾರ ಮಾಡಿದ್ದರು. ಇಬ್ಬರು ಪುತ್ರಿಯರು ಆ ಘಟನೆ ನಡೆದಾಗಿನಿಂದ ನಾಪತ್ತೆಯಾಗಿದ್ದಾರೆ.
ನಂದಿಗ್ರಾಮ ಮತ್ತು ಕೋಲ್ಕತ್ತಾ ಆಸ್ಪತ್ರೆ ವಾರ್ಡ್‌ಗಳಲ್ಲಿ ಬೆಳಕಿಗೆ ಬರುತ್ತಿರುವ ಅಸಾಮಾನ್ಯ ದುರಂತದಲ್ಲಿ ಮನೆಗಳಿಂದ ತಪ್ಪಿಸಿಕೊಂಡವರು ಪ್ರತಿ ರಾತ್ರಿ ತಾವು ಅನುಭವಿಸಿದ ಚಿತ್ರಹಿಂಸೆಯನ್ನು ವಿವರಿಸಿದರು.
ಇಲ್ಲಿ ಮಹಿಳೆಯರು ಸುರಕ್ಷಿತರಲ್ಲ. ಪ್ರತಿ ರಾತ್ರಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು ಅವರು ಮನೆಯಿಂದ ಹೊರಗೆ ಬರಲೇ ಆಗುತ್ತಿಲ್ಲ ಎಂದು ಗೋಕುಲ್ ನಗರ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.
ನಂದಿಗ್ರಾಮವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಕದನದ ಮಧ್ಯೆ ಸಿಕ್ಕಿಬಿದ್ದಿರುವ ಈ ಮುಗ್ಧ ಜನರು ಸಿಪಿಎಂ ಕಾರ್ಯಕರ್ತರನ್ನು ಮಾತ್ರವಲ್ಲದೇ ಅತ್ಯಾಚಾರಿ ಮತ್ತು ಹಂತಕರ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸುತ್ತಿರುವ ಸರ್ಕಾರಿ ಯಂತ್ರವನ್ನು ಕೂಡ ಎದುರಿಸಬೇಕಾಗಿದೆ.
|