ಕಾಂಗ್ರೆಸ್ ಪಕ್ಷವು ಜಾತ್ಯತೀತ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದ ಪರ ಹೋರಾಟವನ್ನು ಮುಂದುವರಿಸುವುದೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ತಿಳಿಸಿದರು. ಜಾತ್ಯತೀತ ನಿಲುವಿಗೆ ಬದ್ಧವಾಗಿರುವುದು ಕಾಂಗ್ರೆಸ್‌ನ ಮುಖ್ಯ ತತ್ವಗಳಲ್ಲಿ ಒಂದಾಗಿದೆ.
ಕೋಮುವಾದಿ ರಾಜಕೀಯ ಧ್ರುವೀಕರಣ ಆಗಿರುವ ಗುಜರಾತ್‌ನಲ್ಲಿ ಜಾತ್ಯತೀತತೆ ಅತೀ ಮುಖ್ಯವಾಗಿದೆ ಎಂದು ಕಾಂಗ್ರೆಸ್ ಸಂದೇಶ್‌ನ ಇತ್ತೀಚಿನ ಸಂಚಿಕೆಯಲ್ಲಿ ಅವರು ಹೇಳಿದ್ದಾರೆ. ಮಹಾತ್ಮ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಎಲ್ಲ ನಂಬಿಕೆಯ, ಎಲ್ಲ ಧರ್ಮದ ಜನರೊಂದಿಗೆ ಬೆರೆತು ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ಜಾತಿ, ಧರ್ಮ ಭೇದವಿಲ್ಲದೇ ರಾಷ್ಟ್ರೀಯತೆಯು ಪೌರರಿಗೆ ಸಮಾನ ಹಕ್ಕುಬಾಧ್ಯತೆಗಳನ್ನು ತಂದುಕೊಟ್ಟಿತು.
ನಮ್ಮ ಮೂಲಭೂತ ತತ್ವಗಳಾದ ಅಹಿಂಸೆ ಮತ್ತು ಸಮಗ್ರ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ನಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರು ಮನಗಾಣುವುದು ಅಗತ್ಯವಾಗಿದೆ. ನಾವು ಜಾತ್ಯತೀತತೆ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಮತ್ತೊಮ್ಮೆ ಹೋರಾಟ ಮಾಡಬೇಕಾಗಿದೆ ಎಂದು ಸೋನಿಯಾ ಕಾರ್ಯಕರ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷದ ಮುಖವಾಣಿಯ ಸಂಪಾದಕೀಯದಲ್ಲಿ ಗುಜರಾತಿನ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ಟೀಕಿಸಿದ್ದು, ರಾಜ್ಯದ ಸಮಗ್ರ ರಾಷ್ಟ್ರೀಯತೆಯ ತತ್ವಗಳನ್ನು ನುಚ್ಚುನೂರುಮಾಡಿದೆಯೆಂದು ಟೀಕಿಸಿದೆ.
ಗುಜರಾತಿನ ಅಲ್ಪಸಂಖ್ಯಾತರ ಮೇಲೆ ಅಮಾನವೀಯ ರೀತಿಯ ದೌರ್ಜನ್ಯವನ್ನು ಎಲ್ಲ ಭಾರತೀಯರು ಖಂಡಿಸಬೇಕೆಂದು ಹೇಳಿದೆ.ಮಹಾತ್ಮ ಹುಟ್ಟಿದ ನೆಲದಲ್ಲಿ ಅವರ ಎಲ್ಲಾ ತತ್ವಗಳನ್ನು ಗಾಳಿಗೆ ತೂರಿದ್ದೇವೆ. ಬಿಜೆಪಿಗೆ ರಾಷ್ಟ್ರೀಯತೆಯ ಅರ್ಥವೇನೆಂದರೆ ಅಲ್ಪಸಂಖ್ಯಾತರ ಮತ್ತು ಬುಡಕಟ್ಟು ಜನರ ಮೇಲೆ ದಾಳಿ ಮಾಡುವುದು ಎಂದು ಸಂಪಾದಕೀಯದಲ್ಲಿ ಬರೆದಿದೆ.
|