ನಂದಿಗ್ರಾಮ ಹಿಂಸಾಚಾರ ವಿಷಯವು ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಎಬ್ಬಿಸಿದ ಪರಿಣಾಮವಾಗಿ ಎರಡೂ ಸದನಗಳನ್ನು ಅಧಿವೇಶನ ಆರಂಭವಾದ ಕೆಲವೇ ಕ್ಷಣಗಳಲ್ಲಿ ದಿನದ ಮಟ್ಟಿಗೆ ಮುಂದೂಡಲಾಯಿತು.
ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಎನ್‌ಡಿಎ, ವಿಶೇಷವಾಗಿ ಬಿಜೆಪಿ ಸದಸ್ಯರು ಈ ವಿಷಯವನ್ನು ಸಂಸತ್ತಿನಲ್ಲಿ ಎತ್ತಿದಾಗ, ಸಿಪಿಎಂ ಸದಸ್ಯರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಗದ್ದಲ ಸೃಷ್ಟಿಯಾಯಿತು.
ಎಡರಂಗ ಆಳ್ವಿಕೆಯ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನೂರಾರು ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಬಿಜೆಪಿ ಉಪ ನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ವಿಷಯ ಪ್ರಸ್ತಾಪಿಸಿದಾಗ ಗದ್ದಲ ಆರಂಭವಾಯಿತು. ಎನ್‌ಡಿಎ ಸದಸ್ಯರು ಮಲ್ಹೋತ್ರಾ ಅವರನ್ನು ಬೆಂಬಲಿಸಿದರು.
ಪ್ರತಿಪಕ್ಷಗಳ ವಾಗ್ದಾಳಿಯನ್ನು ತಡೆದುಕೊಳ್ಳಲು ಅಸಾಧ್ಯವಾದಾಗ ಸಿಪಿಎಂ ಮುಖಂಡರಾದ ವಸುದೇವ್ ಆಚಾರ್ಯ ಮತ್ತು ಮೊಹಮದ್ ಸಲೀಂ ಅವರು 2002ರ ಬಿಜೆಪಿ ಆಡಳಿತದ ಗುಜರಾತ್ ದಂಗೆ ವಿಷಯ ಪ್ರಸ್ತಾಪಿಸಲು ಪ್ರಯತ್ನಿಸಿದರು. ನಂದಿಗ್ರಾಮ ವಿಷಯ ಚರ್ಚೆಯಾಗದೆ ಸದನವು ಸರಿಯಾಗಿ ಕಾರ್ಯನಿರ್ವಹಿಸುವುದು ಅಸಾಧ್ಯ ಎಂದು ಮಲ್ಹೋತ್ರಾ ಎಚ್ಚರಿಸಿದರು.
ಗದ್ದಲವು ಪ್ರಶ್ನಾವೇಳೆಯನ್ನು ನುಂಗಿತು. ಘೋಷಣೆ ಕೂಗುತ್ತಿದ್ದ ಎನ್‌ಡಿಎ ಸದಸ್ಯರು, ವಿಶೇಷವಾಗಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ಸದನದ ವೇದಿಕೆಯತ್ತ ನುಗ್ಗಿದರು. ಗದ್ದಲ ಮುಂದುವರಿದಾಗ ಸಭಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು.
|