"ಮಹಿಳೆಯರಿಗೆ ಅಧಿಕಾರ" ಆಕರ್ಷಣೀಯ ರಾಜಕೀಯ ಘೋಷಣೆಯೆನಿಸಿರುವ ನಡುವೆ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರ ವಿರುದ್ಧ ತಾರತಮ್ಯದ ಧೋರಣೆ ಅನುಸರಿಸುತ್ತಿರುವ ಬಗ್ಗೆ ಕೆಲವು ಸಂಘಟನೆಗಳ ಸಮೂಹ ಧ್ವನಿಯೆತ್ತಿವೆ. ಸರ್ಕಾರೇತರ ಸಂಸ್ಥೆಯಾದ ಕುಟುಂಬ ಉಳಿಸಿ ಸಂಘಟನೆ ಮತ್ತು ಅದರ ಸಹೋದರ ಸಂಘಟನೆಗಳು ನ.19ನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದೆ.
2001-05ರ ನಡುವೆ ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕೆಲಸ ಮಾಡುವ 14,000 ನೌಕರರು ಉದ್ಯೋಗ ಕಳೆದುಕೊಂಡಿದ್ದರೆ, ಅದೇ ಅವಧಿಯಲ್ಲಿ ಮಹಿಳೆಯರು 1,00,000 ಉದ್ಯೋಗಗಳನ್ನು ಸಂಪಾದಿಸಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವರದಿಯನ್ನು ಉಲ್ಲೇಖಿಸಿ ಅದು ಹೇಳಿದೆ.
ಹೆಚ್ಚೆಚ್ಚು ಪುರುಷರು ಉದ್ಯೋಗ ಕಳೆದುಕೊಂಡರೆ, ಅನೇಕ ಮಂದಿ ಮಹಿಳೆಯರು ಉದ್ಯೋಗ ಮಾರುಕಟ್ಟೆಗೆ ಕಾಲಿಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಕಾನೂನಿನ ಅಡಿಯಲ್ಲಿ ಪುರುಷರನ್ನು ತಾರತಮ್ಯದಿಂದ ಕಾಣಲಾಗುತ್ತಿದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಪ್ರತಿದಿನ ಉಲ್ಲಂಘಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳ ದುರ್ಬಳಕೆ, ಕೌಟುಂಬಿಕ ಹಿಂಸಾಚಾರ ಕಾಯ್ದೆಯಿಂದ ಮಹಿಳೆಯರಿಗೆ ರಕ್ಷಣೆ, ವ್ಯಭಿಚಾರ ಕಾನೂನು ಮತ್ತು ವಿಚ್ಛೇದನ, ನಿರ್ವಹಣೆ ಮತ್ತು ಮಗು ಸ್ವಾಧೀನ ಕಾನೂನನ್ನು ಛೂಬಿಟ್ಟು ಕಾನೂನು ಭಯೋತ್ಪಾದನೆಗೆ ಅನೇಕ ಮಂದಿ ಪುರುಷರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಭಾರತೀಯ ಸಮಾಜದಲ್ಲಿ ಪುರುಷರ ವಿರುದ್ಧ ದ್ವೇಷ ಮತ್ತು ತಾರತಮ್ಯ ಹೆಚ್ಚಳದಿಂದ ಅನೇಕ ಮಂದಿ ಪುರುಷರು ಜೀವಕಳೆದುಕೊಂಡಿದ್ದಾರೆಂದು ಅದು ತಿಳಿಸಿದೆ. ಪ್ರತಿಯೊಂದು ವಯೋಮಾನದಲ್ಲಿ ಪುರುಷರ ಆತ್ಮಹತ್ಯೆ ಸಂಖ್ಯೆಯು ಮಹಿಳೆಯರ ಆತ್ಮಹತ್ಯೆ ಸಂಖ್ಯೆಗಿಂತ ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಳದ ಅಂಕಿಅಂಶವನ್ನು ಉಲ್ಲೇಖಿಸಿ ಅದು ತಿಳಿಸಿದೆ.
2005ರಲ್ಲೇ ವಿವಾಹಿತ ಮಹಿಳೆಯರಿಗಿಂತ ಎರಡುಪಟ್ಟು ವಿವಾಹಿತ ಪುರುಷರು ಮಾನಸಿಕ, ಆರ್ಥಿಕ, ದೈಹಿಕ ಮತ್ತು ಕಾನೂನಿನ ಕಿರುಕುಳವನ್ನು ಸಹಿಸದೇ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಎನ್‌ಜಿಒ ತಿಳಿಸಿದೆ.
|