ಉಪಾಹಾರ್ ಸಿನೆಮಾ ದುರಂತ ಸಂಭವಿಸಿ 10 ವರ್ಷಗಳಾದ ಬಳಿಕ ಇಬ್ಬರು ಅನ್ಸಾಲ್ ಸೋದರರು ಸೇರಿದಂತೆ ಎಲ್ಲ 12 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ದೆಹಲಿ ಪಾಟಿಯಾಲ ಹೌಸ್ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ತೀರ್ಪಿಗಾಗಿ 10 ವರ್ಷಗಳಿಂದ ಕಾದಿದ್ದ ಮೃತರ ಬಂಧುಗಳು ಮತ್ತು ಸ್ನೇಹಿತರಿಗೆ ಈ ತೀರ್ಪಿನಲ್ಲಿ ಆರೋಪಿಗಳ ಬಗ್ಗೆ ಮೃದುಧೋರಣೆ ತಾಳಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಸಿನೆಮಾ ಮಾಲೀಕರಾದ ಸುಶೀಲ್ ಮತ್ತು ಗೋಪಾಲ್ ಅನ್ಸಾಲ್ ನಿರ್ಲಕ್ಷ್ಯದಿಂದ ನಿಯಮಗಳನ್ನು ಉಲ್ಲಂಘಿಸಿ ಮಾನವ ಜೀವಗಳಿಗೆ ಅಪಾಯ ಉಂಟುಮಾಡಿರುವುದರಿಂದ ಅವರು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡಿದೆ. ಅನ್ಸಾಲ್ ಸೋದರರು ಸಿನೆಮಾಟೊಗ್ರಫಿ ಕಾಯ್ದೆಯನ್ನು ಉಲ್ಲಂಘಿಸಿ ತಪ್ಪಿತಸ್ಥರೆನಿಸಿದ್ದು, ಹೆಚ್ಚಿನ ಲಾಭದ ಆಸೆಗಾಗಿ ಅಗ್ನಿಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಮಮತಾ ಸೆಹಗಲ್ ತೀರ್ಪು ನೀಡಿದರು. ಇಬ್ಬರು ಮಾಲೀಕರು ಗರಿಷ್ಠ 2 ವರ್ಷಗಳ ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗಿದೆ.
ಅನ್ಸಾಲ್ ಸೋದರರಲ್ಲದೇ ಎಂಸಿಡಿ ಅಧಿಕಾರಿಗಳಾದ ಶ್ಯಾಮ್ ಸುಂದರ ಶರ್ಮಾ ಮತ್ತು ಎನ್‌ಡಿ ತಿವಾರಿ ಹಾಗೂ ದೆಹಲಿ ಅಗ್ನಿಸೇವೆ ಅಧಿಕಾರಿ ಪನ್ವಾರ್ ಅವರ ವಿರುದ್ಧ ಕೂಡ ಇದೇ ಸೆಕ್ಷನ್ ಅಡಿಯಲ್ಲಿ ನಿರ್ಲಕ್ಷ್ಯದ ಕ್ರಮದ ವಿರುದ್ಧ ಶಿಕ್ಷೆ ವಿಧಿಸಲಾಗಿದೆ.
ಬುಧವಾರ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದೆ. ತೀರ್ಪನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಹೋಗುವುದಾಗಿ ತಪ್ಪಿತಸ್ಥರ ವಕೀಲರು ಹೇಳಿದ್ದಾರೆ. ಆದರೆ ಮೃತರ ಬಂಧುಗಳು ಕೂಡ ಕಠಿಣ ಶಿಕ್ಷೆಗಾಗಿ ಮೇಲಿನ ಕೋರ್ಟ್‌ಗೆ ಹೋಗುವುದಾಗಿ ತಿಳಿಸಿದ್ದಾರೆ.
|