ನಂದಿಗ್ರಾಮದಲ್ಲಿನ ಹಿಂಸಾಚಾರ ಮತ್ತು ಬಾಂಗ್ಲಾದೇಶ ಲೇಖಕಿ ತಸ್ಲಿಮಾ ನಸ್ರೀನ್ ಅವರ ವೀಸಾ ವಿಸ್ತರಣೆಯ ವಿರುದ್ಧ ಅಖೀಲ ಭಾರತೀಯ ಅಲ್ಪಸಂಖ್ಯಾತ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಪರಿಣಾಮವಾಗಿ ಕೋಲ್ಕತ್ತಾ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು. ಪರಿಸ್ಥಿತಿಯ ನಿಯಂತ್ರಣ ಜವಾಬ್ದಾರಿಯನ್ನು ಸೈನ್ಯಕ್ಕೆ ನೀಡಲಾಗುತ್ತಿದೆ.
ಪ್ರತಿಭಟನಾಕಾರರ ವಿರುದ್ಧ ಪ. ಬಂಗಾಲ ಪೊಲೀಸರು ಗೋಲಿಬಾರ ಮಾಡಿದ್ದು, ಗೋಲಿಬಾರ ನಂತರವೂ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದರಿಂದ ಸೈನ್ಯವನ್ನು ಕರೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬುದ್ಧದೇವ್ ಅವರು ಪ್ರಕಟಿಸಿದ್ದು. ರಾಜ್ಯದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವಂತೆ ಅವರು ಜನರನ್ನು ಕೇಳಿಕೊಂಡಿದ್ದಾರೆ.
ರೈಟರ್ಸ್ ಭವನದಲ್ಲಿನ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ನಂತರ ಆರು ಸೈನ್ಯದ ತುಕಡಿಗಳನ್ನು ಪರಿಸ್ಥಿತಿ ನಿಯಂತ್ರಣಕ್ಕೆ ಕಳುಹಿಸಿಕೊಡುವಂತೆ ಕೇಂದ್ರವನ್ನು ಕೇಳಿಕೊಳ್ಳಲಾಗಿದೆ. ಕೋಲ್ಕತ್ತಾದ ಎಜೆಸಿ ಬೋಸ್ ರಸ್ತೆಯಲ್ಲಿ ಪ್ರತಿಭಟನಾಕಾರರ ಹಾಕಿದ್ದ ತಡೆಯನ್ನು ತೆರವುಗೊಳಿಸುವ ಸಮಯದಲ್ಲಿ ಡೆಪ್ಯುಟಿ ಪೊಲೀಸ್ ಕಮಿಷನರ್ ಜಾವೇದ್ ಶಮಿಮ್ ಅವರು ಪ್ರತಿಭಟನಾಕಾರರ ಕಲ್ಲು ತೂರಾಟಕ್ಕೆ ಸಿಲುಕಿ ಗಾಯಗೊಂಡಿದ್ದಾರೆ. ಇದೇ ಸಮಯದಲ್ಲಿ ಹಿಂಸಾಚಾರದ ಘಟನೆಯನ್ನು ವರದಿ ಮಾಡಲು ತೆರಳಿದ್ದ ಮಾದ್ಯಮ ಪ್ರತಿನಿಧಿಗಳು ಕೂಡ ಕಲ್ಲು ತೂರಾಟದಲ್ಲಿ ಸಿಲುಕಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನೂರಾರು ಸಂಖ್ಯೆಯಲ್ಲಿ ಇದ್ದ ಪ್ರತಿಭಟನಾಕಾರರ ಹಿಂಸಾಚಾರವನ್ನು ತಹಂಬದಿಗೆ ತರುವುದರಲ್ಲಿ ಪೊಲೀಸರು ವಿಫಲರಾದ ನಂತರ ಕ್ಷಿಪ್ರ ಕಾರ್ಯಾಚರಣೆ ಪಡೆಯು ಗಲಬೆ ನಿಯಂತ್ರಣಕ್ಕೆ ಮುಂದಾಗಿ ಗೋಲಿಬಾರ್, ಲಾಠಿ ಚಾರ್ಜ್ ಮಾಡಿತು.
ಅಖೀಲ ಭಾರತೀಯ ಅಲ್ಪಸಂಖ್ಯಾತ ಸಂಘಟನೆ ಮತ್ತು ಫರ್ಫುರಾಶರಿಫ್ ಮುಜಾಹಿದ್ದಿಯಾ ಅನಾಥ್ ಸಂಸ್ಥೆ ಕರೆ ನೀಡಿದ್ದ ಮೂರು ಗಂಟೆಗಳ ಕಾಲದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ರಸ್ತೆಯನ್ನು ತಡೆ ನಡೆಸಿದರು. ಕೋಲ್ಕತ್ತಾ ನಗರ, 24 ಉತ್ತರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳಲ್ಲಿ ಕೂಡ ನಂದಿಗ್ರಾಮ ಮತ್ತು ತಸ್ಲೀಮಾ ನಸ್ರೀನ್ ಅವರ ವೀಸಾ ವಿಸ್ತರಣೆ ಕುರಿತು ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ.
|