ಲೋಕಸಭೆಯನ್ನು ಭೋಜನವಿರಾಮಕ್ಕೆ ಮುನ್ನ ಗುರುವಾರ ಹಠಾತ್ತನೇ ಮುಂದೂಡಲಾಯಿತು. ಗುಜರಾತಿನ ಕೋಮು ಗಲಭೆಯ ವಿಷಯವನ್ನು ಆರ್‌ಜೆಡಿಯ ದೇವೇಂದ್ರ ಪ್ರಸಾದ್ ಯಾದವ್ ಮತ್ತು ಸಿಪಿಎಂನ ಬಸುದೇವ್ ಆಚಾರ್ಯ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುವುದಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಅಡ್ಡಿಪಡಿಸಿದಾಗ ಲೋಕಸಭೆಯನ್ನು ಹಠಾತ್ತನೆ ಮುಂದೂಡಲಾಯಿತು. ಗುಜರಾತ್ ವಿಷಯವನ್ನು ಎತ್ತುವುದನ್ನು ಆಕ್ಷೇಪಿಸಿ ಬಿಜೆಪಿ ಮತ್ತು ಜೆಡಿಎಯು ಸದಸ್ಯರು ಗದ್ದಲವೆಬ್ಬಿಸಿದರು.
ನರೇಂದ್ರ ಮೋದಿ ಸರ್ಕಾರದ ಸಚಿವರು ಭಾಗಿಯಾಗಿರುವುದನ್ನು ತೆಹಲ್ಕಾದ ಕುಟುಕು ಕಾರ್ಯಾಚರಣೆ ಬಹಿರಂಗ ಮಾಡಿರುವ ಹಿನ್ನೆಲೆಯಲ್ಲಿ ಗುಜರಾತ್ ಗಲಭೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಯಾದವ್ ಒತ್ತಾಯಿಸಿದರು.ಇದೇ ವಿಷಯವನ್ನು ಪ್ರಸ್ತಾಪಿಸಲು ಬಯಸಿದ ಆಚಾರ್ಯ ಮತ್ತು ಸಮಾಜವಾದಿ ಪಕ್ಷದ ರಾಮ್ಜಿಲಾಲ್ ಸುಮನ್ ಕೂಡ ಯಾದವ್ ಜತೆ ಸೇರಿಕೊಳ್ಳಬೇಕೆಂದು ಸ್ಪೀಕರ್ ಪ್ರಕಟಿಸಿದರು.
ಬಳಿಕ ರಕ್ತದ ಬ್ಯಾಂಕ್‌ಗಳ ಸಮಸ್ಯೆಗಳ ವಿಚಾರವನ್ನು ಪ್ರಸ್ತಾಪಿಸುವಂತೆ ಬಿಜೆಪಿ ಸದಸ್ಯರೊಬ್ಬರಿಗೆ ಚಟರ್ಜಿ ಸೂಚಿಸಿದರು. ಕೆಲವು ಸೆಕೆಂಡುಗಳ ಬಳಿಕ ಬಿಜೆಪಿ ಸದಸ್ಯನಿಗೆ ಸ್ವಲ್ಪ ಕಾಲ ಕಾಯುವಂತೆ ಸೂಚಿಸಿದ ಅವರು, ಆಚಾರ್ಯ ಅವರಿಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿದರು
ಈ ಹಂತದಲ್ಲಿ ಬಿಜೆಪಿ ಸದಸ್ಯರು ಎದ್ದುನಿಂತು ಗದ್ದಲದಲ್ಲಿ ಮುಳುಗಿದಾಗ ಪ್ರತಿಪಕ್ಷದ ಮನಸ್ಥಿತಿಯನ್ನು ಗಮನಿಸಿದ ಸ್ಪೀಕರ್ 12.50ಕ್ಕೆ ಹಠಾತ್ತನೆ ಸದನವನ್ನು ಮುಂದೂಡಿದರು.
|