ಸಾಮೂಹಿಕ ಅತ್ಯಾಚಾರಕ್ಕೆ ಬಲಿಪಶುವಾದ ಮಹಿಳೆಯು ಆತ್ಮಹತ್ಯೆ ಮೂಲಕ ಜಗತ್ತಿನಿಂದ ಕಣ್ಮರೆಯಾದಾಗಲೇ ಪೊಲೀಸರು ಈ ಬಗ್ಗೆ ಎಚ್ಚೆತ್ತು ಅತ್ಯಾಚಾರಿಯನ್ನು ಬಂಧಿಸಿದ ಘಟನೆ ನಡೆದಿದೆ. ಪಂಚಾಯತ್ ಸದಸ್ಯೆಯಾಗಿದ್ದ ದಲಿತ ಮಹಿಳೆಯೊಬ್ಬಳು ಸ್ಥಳೀಯ ಕಲೆಕ್ಟರ್ ಕಚೇರಿಯ ಎದುರು ಆತ್ಮಹತ್ಯೆ ಮಾಡಿಕೊಂಡಳು. ತನ್ನ ಸಹೋದ್ಯೋಗಿ ಪಂಚಾಯಿತಿ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ದಲಿತ ಮಹಿಳೆ ಹೊರಿಸಿದ್ದಳು.
ಆದರೆ ಅದಕ್ಕೆ ಸಿಕ್ಕ ಪ್ರತಿಫಲ ಮತ್ತೆ ಮತ್ತೆ ಅತ್ಯಾಚಾರದ ಶಿಕ್ಷೆ. ನ್ಯಾಯಕ್ಕಾಗಿ 6 ವರ್ಷಗಳ ಕಾಲ ಹೋರಾಡಿದ ಉರ್ಮಿಳಾ ಎಂಬ ಹೆಸರಿನ ದುಲಾರಿಯ ಗ್ರಾಮದ ಈ ದಲಿತ ಮಹಿಳೆಗೆ ನ್ಯಾಯ ಸಿಗದಿದ್ದಾಗ ಅಂತಿಮವಾಗಿ ತನ್ನ ಹೋರಾಟಕ್ಕೆ ತಿಲಾಂಜಲಿ ಇತ್ತು ಆತ್ಮಹತ್ಯೆಗೆ ಶರಣಾದಳು. 2001ರಲ್ಲಿ ಪಂಚಾಯಿತಿ ಸದಸ್ಯೆಯಾಗಿದ್ದ ಉರ್ಮಿಳಾ ಪ್ರಭಾವಶಾಲಿ ಯಾದವ ಸರಪಂಚನ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ್ದೇ ಅವಳಿಗೆ ಶಾಪವಾಗಿ ಪರಿಣಮಿಸಿತು.
ಅವಳಿಗೆ ಶಿಕ್ಷೆ ವಿಧಿಸಬೇಕೆಂದು ಸಂಕಲ್ಪಿಸಿದ ಸರಪಂಚನ ಪುತ್ರ ಆಕೆಯ ಮೇಲೆ ಅತ್ಯಾಚಾರ ಎಸಗಿದರೂ ಅವನ ವಿರುದ್ಧ ಯಾವುದೇ ಪ್ರಥಮ ಮಾಹಿತಿ ವರದಿ ದಾಖಲಾಗಲಿಲ್ಲ. ಸರಪಂಚನ ವಿರುದ್ಧ ತಿರುಗಿಬಿದ್ದಿದ್ದಕ್ಕೆ ಅವಳಿಗೆ ಬೆದರಿಕೆ,ಥಳಿತದ ಶಿಕ್ಷೆಗಳು ಎದುರಾದರೂ ಅವಳು ಮಣಿಯದಿದ್ದಾಗ ಅವಳ ಮೇಲೆ ಅದೇ ಆರೋಪಿ ಪುನಃ ಅತ್ಯಾಚಾರ ಮಾಡಿದ. ದಲಿತ ಮಹಿಳೆಯ ನೋವಿನ ಕೂಗು ಮಾತ್ರ ಯಾರ ಕಿವಿಗೂ ಬೀಳಲಿಲ್ಲ.
ಹಲವಾರು ಅರ್ಜಿಗಳನ್ನು ಸಲ್ಲಿಸಿ ಕಂಗಾಲಾದ ಮಹಿಳೆಗೆ ಯಾವ ನ್ಯಾಯವೂ ಸಿಗದಿದ್ದಾಗ ಹತಾಶಸ್ಥಿತಿಗೆ ತಲುಪಿದ ಉರ್ಮಿಳಾ ಜಿಲ್ಲಾಧಿಕಾರಿ ಕಚೇರಿಗೆ ಪುನಃ ಅರ್ಜಿ ಸಲ್ಲಿಕೆಗೆ ಹೊರಟಳು. ಆದರೆ ಈ ಬಾರಿ ಅವಳು ವಿಷ ಸೇವಿಸಿದ್ದಳು. "ನಾನೇಕೆ ಬದುಕಬೇಕು? ನನ್ನ ಜೀವನವು ಒಂದು ವ್ಯಂಗ್ಯವಾಗಿದೆ.ನನಗೆ ನ್ಯಾಯಸಿಗಲಿಲ್ಲ. ಆದ್ದರಿಂದಲೇ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುನ್ನ ವಿಷಸೇವನೆ ಮಾಡಿದೆ" ಎಂದು ಉರ್ಮಿಳಾ ಹೇಳುವಾಗ ದಲಿತ ಮಹಿಳೆಯ ವಿರುದ್ಧ ಶೋಷಣೆ, ದೌರ್ಜನ್ಯದ ಮುಖ ಅನಾವರಣಗೊಂಡಿತು.
|