ಇಸ್ಲಾಂ ಧರ್ಮವನ್ನು ಟೀಕಿಸಿದ್ದಕ್ಕಾಗಿ ವಿವಾದಕ್ಕೊಳಗಾಗಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಶುಕ್ರವಾರ ಎರಡನೆ ಬಾರಿಗೆ ಸ್ಥಳಾಂತರ ಮಾಡಿದ್ದು, ಈ ಬಾರಿ ಜೈಪುರದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಫೈಸಾಲ್ ಎಂದು ಗುರುತಿಸಲಾದ ವ್ಯಕ್ತಿ ಮತ್ತು ಕೆಲವು ರಾಜಸ್ತಾನ ಪೊಲೀಸ್ ಸಿಬ್ಬಂದಿ ಅವರ ಜತೆಗೂಡಿದ್ದಾರೆ.
ಮುಸ್ಲಿಂ ಸಂಘಟನೆಯಾದ ಅಖಿಲ ಭಾರತ ಮಿಲ್ಲಿ ಮಂಡಳಿ ಲೇಖಕಿಯನ್ನು ರಾಜ್ಯದಲ್ಲಿ ಹೆಚ್ಚು ಸಮಯ ಇರಿಸಿಕೊಂಡರೆ ಪ್ರತಿಭಟನೆಗಳನ್ನು ನಡೆಸುವುದಾಗಿ ಬೆದರಿಕೆಯೊಡ್ಡಿತ್ತು. ತಸ್ಲೀಮಾ ಅವರು ನಗರದಲ್ಲಿ ವಾಸ್ತವ್ಯ ಹೂಡಿರುವುದನ್ನು ವಿರೋಧಿಸಿದ ಮಿಲ್ಲಿ ರಾಜ್ಯ ಉಪಾಧ್ಯಕ್ಷ ಮೊಹಮದ್ ಸಲೀಮ್ ಸ್ವಾತಂತ್ರ್ಯವೆಂದರೆ ಯಾವುದೇ ಧರ್ಮವನ್ನು ದೂಷಿಸಬಹುದು ಎಂದರ್ಥವಲ್ಲ ಎಂದು ನುಡಿದಿದ್ದರು.
ಕಳೆದ ರಾತ್ರಿ ಬಾಂಗ್ಲಾದೇಶಿ ಲೇಖಕಿ ಶೀಖಾ ಹೊಟೆಲ್‌ನಲ್ಲಿ ತಂಗಿದ್ದು, 30 ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದರು ಎಂದು ಹೊಟೆಲ್ ಮೂಲಗಳು ತಿಳಿಸಿವೆ.ತಸ್ಲೀಮಾ ಅವರಿಗೆ ರಾಜಸ್ತಾನ ಅಧಿಕಾರಿಗಳು ವೈ ಗ್ರೇಡ್ ಭದ್ರತೆ ಒದಗಿಸಿದ್ದರು ಎಂದು ರಾಜಸ್ತಾನ ಇನ್ಸ್‌ಪೆಕ್ಟರ್ ಜನರಲ್ ಮೇಘಚಂದ್ ಮೀನಾ ತಿಳಿಸಿದ್ದರು.
ತಸ್ಲೀಮಾ ಅವರನ್ನು ಗಡೀಪಾರು ಮಾಡುವಂತೆ ಮುಸ್ಲಿಂ ಸಂಘಟನೆಯೊಂದು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ತಸ್ಲೀಮಾ ಅವರನ್ನು ಜೈಪುರಕ್ಕೆ ತರಲಾಗಿತ್ತು.
|