1997ರಲ್ಲಿ 59 ಜನರನ್ನು ಬಲಿತೆಗೆದುಕೊಂಡ ಉಪಾಹಾರ್ ಅಗ್ನಿದುರಂತಕ್ಕೆ ಸಂಬಂಧಿಸಿದಂತೆ ಉಪಾಹಾರ್ ಸಿನೆಮಾ ಮಂದಿರದ ಮಾಲೀಕರಾದ ಗೋಪಾಲ್ ಮತ್ತು ಸುಶೀಲ್ ಅನ್ಸಾಲ್ ಅವರಿಗೆ ದೆಹಲಿ ಸೆಷನ್ಸ್ ಕೋರ್ಟ್ ಶುಕ್ರವಾರ 2 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ಪ್ರತಿಯೊಬ್ಬ ಸೋದರನಿಗೆ ತಲಾ 5000 ರೂ. ಮತ್ತು ಹೆಚ್ಚುವರಿ 25,000 ರೂ. ಭದ್ರತೆಯ ಆಧಾರದ ಮೇಲೆ ಜಾಮೀನು ನೀಡಲಾಯಿತು.
ಈ ಪ್ರಕರಣದ ಇನ್ನೂ 7 ಅಪರಾಧಿಗಳಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ಇನ್ನುಳಿದ ಮೂವರಿಗೆ 2 ವರ್ಷಗಳ ಶಿಕ್ಷೆಯನ್ನು ಕೋರ್ಟ್ ವಿಧಿಸಿತು. ಸಿಬಿಐ ವಕೀಲ ಮತ್ತು ಮೃತರ ಕುಟುಂಬದ ಪರ ವಕೀಲರಾದ ವಿಕಾಸ್ ಪಾಹವಾ ಎಲ್ಲ 12 ಆರೋಪಿಗಳಿಗೂ ಗರಿಷ್ಠ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಉಪಾಹಾರ ದುರಂತದಲ್ಲಿ ಮೃತಪಟ್ಟವರ ಬಂಧುಗಳ ಸಂಘಟನೆ ಕೂಡ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ನೀಡುವಂತೆ ಲಿಖಿತ ಮನವಿ ಸಲ್ಲಿಸಿದ್ದರು.ಹಿಂದಿ ಚಿತ್ರ ಬಾರ್ಡರ್ ಪ್ರದರ್ಶನ ನಡೆಸುತ್ತಿದ್ದ ಉಪಾಹಾರ್ ಚಿತ್ರಮಂದಿರದಲ್ಲಿ 1997ರ ಜೂನ್ 13ರಂದು ಈ ದುರಂತ ಸಂಭವಿಸಿತ್ತು,
ಕಟ್ಟಡದ ನೆಲಮಾಳಿಗೆಯಲ್ಲಿ ಅತಿಯಾಗಿ ಕಾದ ಜನರೇಟರ್ ಸ್ಫೋಟಿಸಿ ಸಿನೆಮಾ ಮಂದಿರದಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಪುರುಷರು ನಾಲ್ಕು ನಿರ್ಗಮನ ದ್ವಾರಗಳ ಮೂಲಕ ಹೊರಹೋಗಲು ಯತ್ನಿಸುವಾಗ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿತ್ತು.
|