ಗೋವಾ ರಾಜ್ಯಪಾಲ ಮತ್ತು ನಾಗಾಲ್ಯಾಂಡ್‌ನ ಮಾಜಿ ಮುಖ್ಯಮಂತ್ರಿ ಎಸ್.ಸಿ. ಜಮೀರ್ ಶನಿವಾರ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಎನ್‌ಎಸ್‌ಸಿಎನ್(ಐಎಂ)ಉಗ್ರಗಾಮಿಗಳು ನಡೆಸಿದ ದಾಳಿಯಿಂದ ಪಾರಾಗಿದ್ದಾರೆ. ಮೋಕೊಚುಂಗ್‌ನಿಂದ ದಿಮಾಪುರ್ ಕಡೆ ಪ್ರಯಾಣಿಸಿ ಸುಪ್ಟಾಲಾ ಗೇಟ್ ತಲುಪಿದಾಗ ಉಗ್ರಗಾಮಿಗಳು ಜಮೀರ್ ಬೆಂಗಾವಲು ವಾಹನಗಳ ಮೇಲೆ ದಾಳಿ ಮಾಡಿದರೆಂದು ರಾಜ್ಯಪಾಲರನ್ನು ಜತೆಗೂಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಸ್ವಯಂಚಾಲಿತ ಆಯುಧಗಳು, ಗ್ರೆನೇಡ್‌ಗಳು ಮತ್ತು ಮೋರ್ಟಾರ್‌ಗಳನ್ನು ಕೂಡ ಬಳಸಿದ್ದಾರೆಂದು ಹೇಳಲಾಗಿದ್ದು, 20 ಕಾರುಗಳ ಸಂಖ್ಯಾಬಲ ಹೊಂದಿದ್ದ ಬೆಂಗಾವಲು ವಾಹನಗಳು 25 ನಿಮಿಷಗಳವರೆಗೆ ಗುಂಡಿನ ದಾಳಿಯನ್ನು ಎದುರಿಸಿ ಬಳಿಕ ಮರೆಯಾಯಿತು. ಭಾರತೀಯ ಮೀಸಲು ಪಡೆ ಸಿಬ್ಬಂದಿ ಆ ಸ್ಥಳದಿಂದ ಜಮೀರ್ ಅವರನ್ನು ದೂರ ಕರೆದೊಯ್ದರು.
ಎರಡೂ ಕಡೆ ಯಾವುದೇ ಸಾವುನೋವು ಸಂಭವಿಸದಿದ್ದರೂ, ಬೆಂಗಾವಲು ಪಡೆಯ ಮೂರು ವಾಹನಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯಪಾಲರು ತಮ್ಮ ತವರು ರಾಜ್ಯದಲ್ಲಿದ್ದರು. ರಾಜ್ಯಪಾಲರ ಚಲನವಲನಗಳ ಬಗ್ಗೆ ಉಗ್ರಗಾಮಿಗಳು ಸೂಕ್ಷ್ಮವಾಗಿ ನಿಗಾ ವಹಿಸಿದ್ದರು ಎಂದು ಗುಪ್ತಚರ ಮೂಲಗಳು ಹೇಳಿವೆ. ಕಳೆದ ಒಂದು ಚಕ್ರದಲ್ಲಿ ಜಮೀರ್ ಮೇಲೆ ದಾಳಿ ನಡೆಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.
|