ರಾಷ್ಟ್ರದಲ್ಲಿ ಶಾಂತಿ ಮತ್ತು ಕೋಮುಸಾಮರಸ್ಯ ಕದಡಲು ಭಯೋತ್ಪಾದಕರಿಗೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಶಿವರಾಜ್ ಪಾಟೀಲ್ ಸೋಮವಾರ ಖಡಾಖಂಡಿತವಾಗಿ ಹೇಳಿದ್ದಾರೆ. ಭಯೋತ್ಪಾದಕರು ಒಡ್ಡಿರುವ ಬೆದರಿಕೆಗೆ ಸೂಕ್ತ ಪ್ರತ್ಯುತ್ತರ ನೀಡಲು ಎಲ್ಲ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ, ಮಾಧ್ಯಮ ಮತ್ತು ಸಾರ್ವಜನಿಕರು ಸಹಕಾರ ನೀಡಬೇಕೆಂದು ಅವರು ಕೋರಿದರು.
ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಯೋತ್ಪಾದಕ ನಿಗ್ರಹ ದಳ ಸ್ಥಾಪಿಸಿರುವ ನಡುವೆ ಶಿವರಾಜ್ ಪಾಟೀಲ್ ಅವರ ಕರೆ ಹೊರಬಿದ್ದಿದೆ. ಲೋಕಸಭೆಯಲ್ಲಿ ಶಿವರಾಜ್ ಪಾಟೀಲ್ ಮತ್ತು ರಾಜ್ಯಸಭೆಯಲ್ಲಿ ಉಪಸಚಿವರಾದ ಪ್ರಕಾಶ್ ಜೈಸ್ವಾಲ್ ಇಬ್ಬರೂ ಉತ್ತರಪ್ರದೇಶದಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನುತೀವ್ರವಾಗಿ ಖಂಡಿಸಿದರು.
ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಇಂತಹ ಭಯೋತ್ಪಾದಕ ಶಕ್ತಿಗಳನ್ನು ನಿರ್ಬಂಧಕ ಕ್ರಮಗಳ ಮೂಲಕ ತಟಸ್ಥಗೊಳಿಸಬೇಕೆಂದು ಸಂಸತ್ತಿನ ಉಭಯ ಸದನಗಳಲ್ಲಿ ಅವರು ಸಮಾನವಾದ ಹೇಳಿಕೆಗಳನ್ನು ನೀಡಿದರು. ರಾಜ್ಯ ಸರ್ಕಾರವು ಮೃತರ ಸಮೀಪದ ಬಂಧುಗಳಿಗೆ 5 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.
ಉತ್ತರಪ್ರದೇಶ ಮತ್ತು ಅಸ್ಸಾಂ ಭಯೋತ್ಪಾದನೆ ದಾಳಿಗಳ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು 15 ದಿನಗಳೊಳಗೆ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಲಾಗುವುದು ಎಂದು ಶಿವರಾಜ್ ಪಾಟೀಲ್ ಲೋಕಸಭೆಯಲ್ಲಿ ಘೋಷಿಸಿದರು. ಪ್ರಧಾನಿ ಮನಮೋಹನ ಸಿಂಗ್ ಈ ಸಭೆಯ ಅಧ್ಯಕ್ಷತೆ ವಹಿಸುತ್ತಾರೆಂದು ಅವರು ನುಡಿದರು.
ಸ್ಫೋಟಗಳನ್ನು ತಪ್ಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಶಿವರಾಜ್ ಪಾಟೀಲ್ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರದ ನಡುವೆ ಪರಸ್ಪರ ಸಹಕಾರದ ಮೂಲಕ ಈ ಸವಾಲನ್ನು ನಿಭಾಯಿಸುವುದು ಸಾಧ್ಯವೆಂದು ಅವರು ನುಡಿದರು. ಒಕ್ಕೂಟ ಅಪರಾಧ ಮತ್ತು ಒಕ್ಕೂಟ ತನಿಖಾ ವ್ಯವಸ್ಥೆಗೆ ಸಂಬಂಧಿಸಿದ ಸಲಹೆಗಳನ್ನು ಉಲ್ಲೇಖಿಸಿ, ಎಲ್ಲ ರಾಜ್ಯಗಳು ಒಪ್ಪಿಕೊಂಡರೆ ಅದನ್ನು ಪರಿಗಣಿಸುವುದಾಗಿ ಹೇಳಿದರು.
ಕೇಂದ್ರದ ಬೇಹುಗಾರಿಕೆ ದಳ ಪ್ರತಿಯೊಂದು ಗ್ರಾಮ ಮತ್ತು ಬೀದಿಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ ಅವರು ಅವು ರಾಜ್ಯ ಪೊಲೀಸರ ವಿಶೇಷ ವಿಭಾಗಗಳು ಮ್ತು ಸಿಐಡಿಯ ಕೆಲಸ ಎಂದು ಉತ್ತರಿಸಿದರು.
|