1993ರ ಮುಂಬೈ ಸ್ಫೋಟಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರನಟ ಸಂಜಯ್ ದತ್ ಅವರಿಗೆ ಸುಪ್ರೀಂಕೋರ್ಟ್ ಮಂಗಳವಾರ ಜಾಮೀನು ನೀಡಿರುವುದರಿಂದ ಅವರು ನಿಟ್ಟುಸಿರು ಬಿಡುವಂತಾಗಿದೆ. ಸಂಜಯ್ ದತ್ ಅವರಿಗೆ ಮುಂಬೈ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಟಾಡಾ ಕೋರ್ಟ್ ಶಸ್ತ್ರಾಸ್ತ್ರ ಕಾಯ್ದೆಯಡಿ 6 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ದತ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಕೋರ್ಟ್ ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆ ಮೃದುವಾಗಿದ್ದು, ದತ್ ಪ್ರಕರಣ ಇದರ ವ್ಯಾಪ್ತಿಗೆ ಬರುವುದರಿಂದ ಅವರ ಪ್ರಕರಣವು ಜಾಮೀನಿಗೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಇದಕ್ಕೆ ಮುಂಚೆ ನ.20ಕ್ಕೆ ದತ್ ಜಾಮೀನು ಅರ್ಜಿಯ ವಿಚಾರಣೆಯನ್ನು ಇಟ್ಟುಕೊಂಡಿದ್ದ ಕೋರ್ಟ್ ಮುಂಬೈ ಸ್ಫೋಟ ಪ್ರಕರಣದ ಉಳಿದ ಕೈದಿಗಳ ಜಾಮೀನು ಕೋರಿಕೆ ಅರ್ಜಿಗಳ ಜತೆ ದತ್ ಅರ್ಜಿಯ ವಿಚಾರಣೆಯನ್ನು ನ.27ಕ್ಕೆ ನಡೆಸುವುದಾಗಿ ತಿಳಿಸಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಂಜಯ್ ದತ್ ತಮ್ಮ ಜೀವನವನ್ನು ಪುನರ್‌ರೂಪಿಸಲು ಬಯಸಿರುವುದಾಗಿ ದತ್ ವಕೀಲರು ತಿಳಿಸಿದರು. ದತ್‌ಗೆ ಜಾಮೀನು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಬಿಐ ತನ್ನದೇನೂ ಅಭ್ಯಂತರವಿಲ್ಲವೆಂದು ತಿಳಿಸಿತು. ಏತನ್ಮಧ್ಯೆ, ಟಾಡಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವ ಉಳಿದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು.
ಸಂಜಯ್ ದತ್ ಅವರು ಮುಂಬೈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಎಕೆ-56 ಬಂದೂಕು ಮತ್ತು ಪಿಸ್ತೂಲು ಮುಂತಾದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆಂಬ ಕಾರಣದ ಮೇಲೆ ಟಾಡಾ ಕೋರ್ಟ್ ವಿಧಿಸಿದ ಶಿಕ್ಷೆಯ ವಿರುದ್ಧ ದತ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಮುಂಚೆ ವಾದ ಮಂಡಿಸಿದ ದತ್ ವಕೀಲರು ದತ್ ಸದ್ವರ್ತನೆಯ ಆಧಾರದ ಮೇಲೆ ಅವರಿಗೆ ಜಾಮೀನು ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿಕೊಂಡರು.
ದತ್ ಅವರಿಗೆ ಜಾಮೀನು ನೀಡಿದ ಬಳಿಕ ಕಳೆದ 10 ವರ್ಷದಿಂದ ಅವರು ಕಾನೂನು ಮುರಿಯದೇ ಅದಕ್ಕೆ ಬದ್ಧವಾಗಿ ನಡೆದುಕೊಂಡಿದ್ದಾರೆಂದು ವಕೀಲರು ವಾದಿಸಿದ್ದರು.
|