ಭಾರತದ ಪ್ರಥಮ ಪೊಲೀಸ್ ಅಧಿಕಾರಿಣಿಯಾಗಿ ಚಿರಪರಿಚಿತರಾದ ಕಿರಣ್ ಬೇಡಿ ಸ್ವಯಂ ನಿವೃತ್ತಿ ಪಡೆಯಲು ಕೋರಿಕೆ ಸಲ್ಲಿಸಿದ್ದಾರೆ. ಕೆಲವು ವಾರಗಳ ಹಿಂದೆ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಸೇವೆಯನ್ನು ತ್ಯಜಿಸಲು ಬಲವಾದ ಶೈಕ್ಷಣಿಕ ಮತ್ತು ಸಾಮಾಜಿಕ ಆಸಕ್ತಿ ಕಾರಣವೆಂದು ಅವರು ಉದಾಹರಿಸಿದ್ದರು. ಅರ್ಜಿಯು ಇನ್ನೂ ಸಚಿವಾಲಯದ ಪರಿಶೀಲನೆಯಲ್ಲಿದ್ದು, ಇದುವರೆಗೆ ಯಾವ ಉತ್ತರವನ್ನೂ ನೀಡಿಲ್ಲ.
"ಕೆಲವು ವಾರಗಳ ಹಿಂದೆ ನಾನು ವಿಆರ್‌ಎಸ್‌ಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವ ಉತ್ತರವಿನ್ನೂ ಬಂದಿಲ್ಲ" ಎಂದು ಕಿರಣ್ ಬೇಡಿ ಪ್ರತಿಕ್ರಿಯಿಸಿದ್ದಾರೆ. 1972ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಪೊಲೀಸ್ ವ್ಯವಸ್ಥೆಯ ಸುಧಾರಣೆಗೆ ಇದುವರೆಗೆ ಆಂತರಿಕವಾಗಿ ಕಾರ್ಯನಿರ್ವಹಿಸಿದ್ದು, ಇನ್ನುಮೇಲೆ ಹೊರಗಿನಿಂದ ಕೆಲಸ ಮಾಡುವುದಾಗಿ ತಿಳಿಸಿದರು.
ಅರೆ ಮಿಲಿಟರಿ ಪಡೆಯ ಉನ್ನತ ಸ್ಥಾನದಲ್ಲಿ ಅವಕಾಶ ನೀಡುವುದಾಗಿ ಸರ್ಕಾರ ನೀಡಿದ್ದ ಭರವಸೆ ಮುರಿದಿದ್ದರಿಂದ ಅವರಿಗೆ ನಿರಾಶೆಯಾಯಿತೇ ಎಂದು ಪ್ರಶ್ನಿಸಿದಾಗ ಅಲ್ಲವೆಂದು ಹೇಳಿದ ಅವರು, ಪೊಲೀಸ್ ವ್ಯವಸ್ಥೆಯ ಹೊರಗಿದ್ದುಕೊಂಡೇ ಕೆಲಸ ಮಾಡುವ ತಮ್ಮ ಇಚ್ಛೆಯೇ ಇದಕ್ಕೆ ಕಾರಣವೆಂದು ನುಡಿದರು. ವೈ.ಎಸ್. ದಡವಾಲ್ ಅವರು ದೆಹಲಿಯ ಪೊಲೀಸ್ ಆಯುಕ್ತರಾಗಿ ನೇಮಕವಾದ ಬಳಿಕ ಬೇಡಿ ಕಳೆದ ಜುಲೈನಲ್ಲಿ ಪ್ರತಿಭಟನಾರ್ಥ ರಜೆಯ ಮೇಲೆ ತೆರಳಿದ್ದರು.
ಕಿರಣ್ ಬೇಡಿ ಅಧಿಕಾರಾವಧಿಯಲ್ಲಿ ಜೈಲುಗಳ ಸುಧಾರಣೆಗೆ ನಿರ್ಭಯ ಮತ್ತು ಮಾನವೀಯ ಕ್ರಮಗಳನ್ನು ಕೈಗೊಂಡಿದ್ದರು. ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ನಾಮಾಂಕಿತವಾದ ಪ್ರತಿಷ್ಠಿತ ಮ್ಯಾಗ್‌ಸೆಸೆ ಪ್ರಶಸ್ತಿ ವಿಜೇತರಾದ ಅವರು ಅತ್ಯಂತ ದಕ್ಷ ಪೊಲೀಸ್ ಅಧಿಕಾರಿಣಿಯಾಗಿ ಹೆಸರು ಪಡೆದಿದ್ದರು.
|