ಇಂದು ದೇಶಕ್ಕೆ ಶಿರಡಿ ಸಾಯಿ ಬಾಬಾ ನೀಡಿದ ಸಂದೇಶ ತತ್ವದ ಪಾಲನೆ ಮತ್ತು ಅನುಷ್ಠಾನ ಅವಶ್ಯವಾಗಿದ್ದು, ಸರ್ವದೇವಃ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಎಂದು ಹೇಳಿದ ಸಾಯಿ ಬಾಬಾ ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡಂತಹ ಮಹಾಪುರುಷ. ಶಾಂತಿ ಮತ್ತು ಏಕತೆಯನ್ನೊಳಗೊಂಡ ಸಮಾಜ ನಿರ್ಮಾಣ ಸಾಯಿಬಾಬಾ ಅವರ ತತ್ವಗಳಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಶೇಖಾವತ್ ಅವರಿಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಏಷಿಯಾದ ಮೊದಲ ಪ್ರಸಾದಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಾಯಿ ಬಾಬಾ ಅವರ ನಂಬಿಕೆ ಮತ್ತು ಸಹನೆ ಇಂದಿನ ಸಮಾಜಕ್ಕೆ ಅವಶ್ಯವಾಗಿದೆ. ಶ್ರದ್ಧಾ, ಸಬೂರಿ ಎಂದು ಕರೆಸಿಕೊಳ್ಳುವ ಅವರ ತತ್ವಗಳು ಸಮಾಜದಲ್ಲಿನ ಅಂತಃಶಕ್ತಿಯ ಬಲವರ್ಧನೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಪತಿ ದೇವಿಸಿಂಗ್ ಅವರೊಂದಿಗೆ ಶಿರಡಿಯ ಸಾಯಿಬಾಬಾನ ಆಶ್ರಮಕ್ಕೆ ಬಂದಿದ್ದ ಪ್ರತಿಭಾದೇವಿ ಅವರು ಸುಮಾರು 15 ನಿಮಿಷಗಳ ಕಾಲ ತಂಗಿದ್ದು ನಂತರ ಮುಂಬೈಗೆ ಪ್ರಯಾಣ ಬೆಳೆಸಿದರು.
24 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೃಹತ್ ಕಟ್ಟಡದಲ್ಲಿ ಪ್ರಸಾದ ನಿಲಯವನ್ನು ಸ್ಥಾಪಿಸಲಾಗಿದ್ದು. ಕೇವಲ ಐದು ರೂ ನಾಮಮಾತ್ರ ಶುಲ್ಕ ನೀಡಿ ಅಲ್ಲಿ ಭಕ್ತರು ಭೋಜನ ಮಾಡಬಹುದಾಗಿದೆ.
ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಮಂದಿರದ ಟ್ರಸ್ಟೀಗಳಾದ ಎ. ಬಿ ಖಾಂಬೇಕರ್, ಏಕನಾಥ್ ಗೊಂಡಕರ್, ಜಯಂತ್ ಸಾಸನೆ ಅವರು ಸಾಯಿ ಬಾಬಾ ಅವರ ರಜತದ ಮೂರ್ತಿ ಮತ್ತು ಮೂರು ಚಿನ್ನದ ನಾಣ್ಯಗಳನ್ನು ಪ್ರತಿಭಾದೇವಿ ಅವರಿಗೆ ಸ್ಮರಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಸಚಿವರುಗಳಾದ ಪತಂಗರಾವ್ ಕದಮ್, ಬಾಳಾಸಾಹೇಬ್ ಥೊರಟ್, ಬಬನ್ ರಾವ್ ಪಂಚಪುತೆ ಮತ್ತು ದಿಲೀಪ್ ವಾಲ್ಸೆ ಮುಂತಾದವರು ಉಪಸ್ಥಿತರಿದ್ದರು.
|