ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ವಿಪರೀತ ಆಂತರಿಕ ಭಿನ್ನಮತವನ್ನು ಎದುರಿಸುತ್ತಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಗುಜರಾತ್ ಮತ್ತು ಮೆಹ್ಸಾನಾಗಳಲ್ಲಿ ಜಯ ಸಾಧಿಸುವ ಮೂಲಕ ದಕ್ಷಿಣ ಗುಜರಾತ್‌ನಲ್ಲಿ ಆಗುವ ಸ್ಥಾನ ನಷ್ಟವನ್ನು ಸರಿದೂಗಿಸಿಕೊಳ್ಳುವ ತವಕದಲ್ಲಿದೆ.
ಸೌರಾಷ್ಟ್ರ ಪ್ರದೇಶದಲ್ಲಿನ ಪಕ್ಷದ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಉತ್ತರ ಗುಜರಾತ್‌ನಲ್ಲಿ ಫಲಿತಾಂಶ ಮುಂದಿನ ಸರಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಸಂಶಯವಿಲ್ಲ ಎಂದು ಮೆಹ್ಸಾನಾ ಜಿಲ್ಲಾ ಬಿಜೆಪಿ ಅದ್ಯಕ್ಷ ಕೇಶುಭಾಯಿ ಎಂ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಸೌರಾಷ್ಟ್ರದ ಪ್ರದೇಶದ ಆರು ಬಿಜೆಪಿ ನಾಯಕರು ಬಂಡೆದ್ದು, ಕಾಂಗ್ರೆಸ್ ಟಿಕೆಟ್ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಂತಿಮ ಹಂತದ ಚುನಾವಣೆಯು ಡಿಸೆಂಬರ್ 16ರಂದು ನಡೆಯಲಿದೆ.
ಇನ್ನೊಂದು ಪಕ್ಷದ ಮೂಲಗಳ ಪ್ರಕಾರ ರಾಜ್ಯದ ಉತ್ತರದ ಭಾಗಗಳಲ್ಲಿ ಪಕ್ಷದ ಪರ ಬರುವ ಚುನಾವಣಾ ಫಲಿತಾಂಶಗಳ ಆಧಾರದ ಮೇಲೆ ಪುನಃ ಆಡಳಿತ ಸೂತ್ರವನ್ನು ಕೈಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿವೆ.
ಈ ಬಾರಿ ಮೆಹ್ಸಾನಾದಲ್ಲಿ ಪಕ್ಷದ ಪರ ಫಲಿತಾಂಶಗಳು ಬರುವ ಸಾಧ್ಯತೆ ಇದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷ ಆರು ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಸಂಖ್ಯೆ ಏಳನ್ನು ಮುಟ್ಟುವುದನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ ಅಲ್ಲಿನ ಪಕ್ಷದ ಪದಾದಿಕಾರಿಗಳು.
ಸೌರಾಷ್ಟ್ರ ಪ್ರದೇಶದ ಮೇಲೆ ವ್ಯಾಪಾರಿಗಳ ಹಿಡಿತವಿದ್ದು, ಅವರು ತಮ್ಮದೇ ಆದ ಬೆಂಬಲಿಗರನ್ನು ಹೊಂದಿರುವುದು ಪಕ್ಷದ ವೋಟ್ ಬ್ಯಾಂಕ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದರೆ ಸೌರಾಷ್ಟ್ರದಲ್ಲಿ ಉತ್ತರ ಗುಜರಾತ್ ನಾಗರಿಕರ ಸಂಖ್ಯಾ ಬಾಹುಳ್ಯ ಇರುವುದರಿಂದ ಮತ್ತು ಉತ್ತರ ಗುಜರಾತ್ ನಾಗರಿಕರು ಭಾರತೀಯ ಜನತಾ ಪಕ್ಷದ ಕಟ್ಟಾ ಅನುಯಾಯಿಗಳು ಆಗಿರುವುದು ಫಲಿತಾಂಶದ ಮೇಲೆ ಅಷ್ಟೋಂದು ವ್ಯತಿರಿಕ್ತ ಪರಿಣಾಮ ಬೀರಲಿಕ್ಕಿಲ್ಲ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
|