ನವದೆಹಲಿಯಲ್ಲಿ ಅಜ್ಞಾತ ಸ್ಥಳದಲ್ಲಿರುವ ವಿವಾದಾತ್ಮಕ ಬಾಂಗ್ಲಾದೇಶ ಲೇಖಕಿ ತಸ್ಲೀಮಾ ನಸ್ರೀನ್ ಕುರಿತು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಲಿದೆ. ಲೇಖಕಿಯ ಬಗ್ಗೆ ಪ್ರತಿಕ್ರಿಯಿಸುವಂತೆ ವರದಿಗಾರರು ಕೇಳಿದಾಗ ನಸ್ರೀನ್ ಅವರನ್ನು ಕುರಿತು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಬುಧವಾರ ಹೇಳಿಕೆ ನೀಡಲಿದ್ದಾರೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಕೋಲ್ಕತಾದಲ್ಲಿ ವಾಸಿಸುತ್ತಿದ್ದ ನಸ್ರೀನ್ ವಿರುದ್ಧ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಕಳೆದ ಗುರುವಾರ ನಗರವನ್ನು ತ್ಯಜಿಸಿದರು. ಅವರನ್ನು ಮುಂಚೆ ಜೈಪುರಕ್ಕೆ ಒಯ್ದಬಳಿಕ ನವದೆಹಲಿಯಲ್ಲಿರುವ ರಾಜಸ್ತಾನ ಭವನದಲ್ಲಿ ಇರಿಸಲಾಗಿತ್ತು.
ಆದರೆ ಮಂಗಳವಾರ ನಸುಕಿನಿಂದ ಅಜ್ಞಾತ ಸ್ಥಳಕ್ಕೆ ಅವರನ್ನು ಸ್ಥಳಾಂತರಿಸಲಾಗಿದ್ದು, ಅವರು ತಂಗಿರುವ ಸ್ಥಳವನ್ನು ಕುರಿತು ನಿಗೂಢತೆ ಆವರಿಸಿದೆ.ಕೇಂದ್ರ ಭದ್ರತಾ ಸಂಸ್ಥೆಗಳ ಸಿಬ್ಬಂದಿ ಮಧ್ಯರಾತ್ರಿ ಕಳೆದ ಸ್ವಲ್ಪ ಹೊತ್ತಿನಲ್ಲೇ ರಾಜಸ್ತಾನ ಅತಿಥಿ ಗೃಹದಲ್ಲಿದ್ದ ಅವರನ್ನು ಎಬ್ಬಿಸಿ ಅಜ್ಞಾತ ಸ್ಥಳದ ಸುರಕ್ಷಿತ ಜಾಗಕ್ಕೆ ತಮ್ಮ ಜತೆ ಬರುವಂತೆ ತಿಳಿಸಿದರು.
|