ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅಹ್ಮದಾಬಾದ್‌ನ ಮಣಿನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ನಮ್ಮ ಸರ್ಕಾರ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗುವುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಮೋದಿ ವಿರುದ್ಧ ತೀಕ್ಷ್ಣ ಹೋರಾಟ ನೀಡಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ದಿನ್ಶಾ ಪಟೇಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.
ದಿನ್ಶಾ ದೀರ್ಘಕಾಲದಿಂದ ಸಾರ್ವಜನಿಕ ಜೀವನದಲ್ಲಿದ್ದು, ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರಿಗೆ ಮೋದಿ ಸರಿಸಾಟಿಯಲ್ಲ ಎಂದು ಪ್ರತಿಪಕ್ಷದ ನಾಯಕ ಅರ್ಜುನ್ ಮೋದಾವಿಡಾ ತಿಳಿಸಿದ್ದಾರೆ. ಮೋದಿಯ ಆಡಳಿತ ಶೈಲಿಯಿಂದ ಅಸಂತುಷ್ಠರಾಗಿರುವ ಪಟೇಲ್ ಸಮುದಾಯಕ್ಕೆ ದಿನ್ಶಾ ಅವರು ಸೇರಿರುವುದರಿಂದ ಪಕ್ಷದ ವರಿಷ್ಠ ಮಂಡಳಿ ಅವರನ್ನು ಆಯ್ಕೆ ಮಾಡಿದೆ.
ಮೋದಿ ವಿರುದ್ಧ ತಮ್ಮ ಪಕ್ಷದ ಅಭ್ಯರ್ಥಿ ತೀವ್ರ ಹೋರಾಟ ನೀಡುವರೆಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ತಿಳಿಸಿದರು.ಮಹಾತ್ಮ ಗಾಂಧಿ ಬಂಧುಗಳು ಅಥವಾ ಮೋದಿ ಎದುರಾಳಿಯಾದ ಮಲ್ಲಿಕಾ ಸಾರಾಭಾಯ್ ಮುಂತಾದವರನ್ನು ಮೋದಿ ವಿರುದ್ಧ ನಿಲ್ಲಿಸುವುದರಿಂದ ಬರೀ ಸಾಂಕೇತಿಕ ಹೋರಾಟ ನೀಡಲು ಸಾಧ್ಯವಾಗುತ್ತದೆಂದು ಭಾವಿಸಿದ ಕೇಂದ್ರ ನಾಯಕತ್ವದ ಬಹುತೇಕ ಮಂದಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪಟೇಲ್ ಅವರನ್ನು ಆಯ್ಕೆಮಾಡಲಾಯಿತು. ಮಹಾತ್ಮ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಅವರನ್ನು ಕೂಡ ಸಂಪರ್ಕಿಸಲಾಗಿತ್ತು.
|