ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಭಾರತದಲ್ಲಿ ವಾಸ್ತವ್ಯ ಹೂಡುವ ಬಗ್ಗೆ ವಿವಾದ ಭುಗಿಲೆದ್ದಿರುವ ನಡುವೆ, ನಸ್ರೀನ್ ಅವರಿಗೆ ಆಶ್ರಯ ನೀಡುವುದನ್ನು ಮುಂದುವರಿಸುವುದಾಗಿ ಸರ್ಕಾರ ಬುಧವಾರ ಹೇಳಿದೆ. ಆದರೆ ರಾಷ್ಟ್ರದ ಜನತೆಯ ಭಾವನೆಗಳಿಗೆ ನೋವುಂಟಾಗುವ ಯಾವುದೇ ಚಟುವಟಿಕೆ ನಡೆಸದಂತೆ ಅವರನ್ನು ನಿರ್ಬಂಧಿಸಲಾಗಿದೆ.
ಲೋಕಸಭೆಯಲ್ಲಿ ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಇತಿಹಾಸದುದ್ದಕ್ಕೂ ರಕ್ಷಣೆ ಬೇಡಿ ಬಂದವರಿಗೆ ಆಶ್ರಯ ನಿರಾಕರಿಸಿದ ಉದಾಹರಣೆಯಿಲ್ಲ ಎಂದು ನುಡಿದರು. ನಸ್ರೀನ್ ಅವರು ರಾಷ್ಟ್ರವನ್ನು ತ್ಯಜಿಸಬೇಕೆಂಬ ಒತ್ತಾಯಗಳ ನಡುವೆ ಹೇಳಿಕೆ ನೀಡಿದ ಪ್ರಣವ್ ಮುಖರ್ಜಿ ಭಾರತಕ್ಕೆ ಆಗಮಿಸಿದ ಅತಿಥಿಗಳಿಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ರಕ್ಷಣೆ ನೀಡುವುದೆಂದು ಹೇಳಿದರು.
ತಸ್ಲೀಮಾ ನಸ್ರೀನ್ ಪ್ರಕರಣದಲ್ಲಿ ಕೂಡ ಇದು ಅನ್ವಯಿಸುತ್ತದೆ ಎಂದು ಹೇಳಿದ ಸಚಿವರು, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶಿ ಲೇಖಕಿಗೆ ಸಂಬಂಧಿಸಿದ ವಿಷಯ ಗಣನೀಯವಾಗಿ ಸಾರ್ವಜನಿಕ ಗಮನವನ್ನು ಸೆಳೆದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಶ್ರಯ ಪಡೆದವರು ಸ್ನೇಹಿ ರಾಷ್ಟ್ರಗಳ ಜತೆ ಬಾಂಧವ್ಯಕ್ಕೆ ಧಕ್ಕೆಯಾಗುವ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಅವರು ಸೂಚಿಸಿದರು. ಜನರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸಗಳಿಂದ ಕೂಡ ಅವರನ್ನು ನಿರ್ಬಂಧಿಸಲಾಗಿದೆ ಎಂದು ಅವರು ನುಡಿದರು.
|