ಸುಮಾರು ಮೂರು ದಿನಗಳ ಕಣ್ಣಾಮುಚ್ಚಾಲೆ ಆಟದ ಬಳಿಕವೂ ಚಿರತೆ ಎಂದು ಶಂಕಿಸಲಾದ ವನ್ಯಜೀವಿಯನ್ನು ಹಿಡಿಯಲು ಇಲ್ಲಿನ ಅರಣ್ಯ ಇಲಾಖೆ ವಿಫಲವಾಗಿದೆ. ಫೋಲ್ಡಿವಾಲ್ ಗ್ರಾಮದಲ್ಲಿ ಮೈಮೇಲೆ ಚುಕ್ಕಿಗುರುತಿರುವ ಈ ವನ್ಯಜೀವಿಯನ್ನು ಚಿರತೆ ಎಂದು ಗುರುತಿಸಲಾಗಿದ್ದು, ಸೋಮವಾರ ನಸುಕಿನಲ್ಲಿ ದಾರಿಹೋಕರೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.
ಚಿರತೆ ಅಲ್ಲಲ್ಲಿ ಕಾಣಿಸಿಕೊಂಡು ಬಳಿಕ ನಾಪತ್ತೆಯಾಗುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವುದು ತಲೆನೋವು ತಂದಿದೆ. ಚಿರತೆ ಅಡಗಿಕೊಂಡ ಗದ್ದೆಯನ್ನು ತಾವು ಸುತ್ತುವರಿದು ಮೂರು ದಿನಗಳಾದ ಬಳಿಕವೂ ಅದು ಹೊರಗೆ ಬರಲಿಲ್ಲವೆಂದು ಡಿಎಫ್‌ಒ ಸತ್ಮಾಂ ಸಿಂಗ್ ಹೇಳಿದ್ದಾರೆ. ಚಿರತೆ ಸ್ಥಳದಿಂದ ತೆರಳಿರಬಹುದೆಂದು ಭಾವಿಸಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ವಾಪಸು ಕಳಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ನೆರೆಯ ಗ್ರಾಮಗಳಿಗೆ ತೆರಳಬಹುದೆಂಬ ಭೀತಿಯಿಂದ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಚಿರತೆಯನ್ನು ಗುಂಡಿಕ್ಕಿ ಸಾಯಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದರೂ ಅದು ವಿಪರೀತ ಕ್ರಮವಾಗಿದ್ದು, ಚಿರತೆಯ ಪ್ರಜ್ಞೆ ತಪ್ಪಿಸಲು ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸುವುದಾಗಿ ಅವರು ನುಡಿದರು.
|