ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)ಯಲ್ಲಿ ಸ್ಥಾನಿಕ ವೈದ್ಯರು ಗುರುವಾರದಿಂದ ಅನರ್ದಿಷ್ಟ ಅವಧಿಯ ಮುಷ್ಕರ ಹೂಡಿರುವುದರಿಂದ ಆರೋಗ್ಯ ಸೇವೆಗೆ ತೀವ್ರ ಪೆಟ್ಟು ಬಿದ್ದಿದೆ. ಹೊರರೋಗಿ ವಿಭಾಗದ ಸೇವೆ ಸಹ ಅಸ್ತವ್ಯಸ್ತವಾಗಿದ್ದು, ಶಸ್ತ್ರಚಿಕಿತ್ಸೆ ವಿಭಾಗದ ತಂತ್ರಜ್ಞರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಅಂಗೀಕೃತವಾದ ಏಮ್ಸ್ ತಿದ್ದುಪಡಿ ಮಸೂದೆ ವಿರುದ್ಧ ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಏಮ್ಸ್ ತಿದ್ದುಪಡಿ ಮಸೂದೆಯಲ್ಲಿ ಸಂಸ್ಥೆಯ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ಅಥವಾ 62 ವಯಸ್ಸಿನವರೆಗೆ ಸೀಮಿತಗೊಳಿಸಿದೆ. ನಾವು ಒಪಿಡಿ ಸೇವೆಯನ್ನು ಬಹಿಷ್ಕರಿಸುತ್ತೇವೆ,
ಒಟಿ ತಂತ್ರಜ್ಞರು ಕೂಡ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ಮಸೂದೆಯನ್ನು ಹಿಂತಿರುಗಿಸುವ ತನಕ ನಾವು ಮುಷ್ಕರ ಮುಂದುವರಿಸುತ್ತೇವೆ ಎಂದು ಸ್ಥಾನಿಕ ವೈದ್ಯರ ಸಂಘಟನೆಯ ಅಧ್ಯಕ್ಷ ಕುಮಾರ್ ಹರ್ಷ್ ತಿಳಿಸಿದ್ದಾರೆ.
ಒಂದೊಮ್ಮೆ ರಾಷ್ಟ್ರಪತಿ ಮಸೂದೆಗೆ ಅನುಮತಿ ನೀಡಿದ ಪಕ್ಷದಲ್ಲಿ 42 ವರ್ಷಗಳಿಂದ ಸಂಸ್ಥೆಯ ಜತೆ ಸಂಬಂಧಹೊಂದಿರುವ 66 ವರ್ಷ ವಯಸ್ಸಿನ ಡಾ. ವೇಣುಗೋಪಾಲ್ ರಾಜೀನಾಮೆ ನೀಡಬೇಕಾಗುತ್ತದೆ. ಅವರ ಬದಲಿಗೆ ಉಸ್ತುವಾರಿ ನಿರ್ದೇಶಕರನ್ನು ನೇಮಿಸಲು ಆರೋಗ್ಯ ಸಚಿವಾಲಯ ಯೋಚಿಸುತ್ತಿದೆ.
ಮೀಸಲಾತಿ ವಿರುದ್ಧ ಪ್ರತಿಭಟನೆ ಬಳಿಕ ಏಮ್ಸ್‌ನಲ್ಲಿ ಭಿನ್ನಮತ ಕಾಣಿಸಿಕೊಂಡಿತು. ಸಂಸ್ಥೆಯು ಪುನಃ ಚೇತರಿಸಿಕೊಂಡು ಚೆನ್ನಾಗಿ ಕಾರ್ಯನಿರ್ವಹಿಸುವುದೆಂದು ಡಾ. ವೇಣುಗೋಪಾಲ್ ವಿರೋಧಿಗಳು ಹೇಳುತ್ತಿದ್ದಾರೆ.
ಆದರೆ ಅನೇಕ ವೈದ್ಯರು ಮತ್ತು ವಿದ್ಯಾರ್ಥಿಗಳು ಸರ್ಕಾರದ ಹಸ್ತಕ್ಷೇಪದಿಂದ ಕೆಲಸ ಮಾಡುವ ಚೈತನ್ಯವೆಲ್ಲ ಇಂಗಿ ಹೋಗಿದೆಯೆಂದು ಹೇಳುತ್ತಿದ್ದಾರೆ. ವೇಣುಗೋಪಾಲ್ ನಿರ್ಗಮನದಿಂದ ಅನೇಕ ಮಂದಿ ವಲಸೆ ಹೋಗುವ ನಿರೀಕ್ಷೆಯಿದೆ. ಅಂತಿಮವಾಗಿ ಯಾರಿಗೆ ಜಯ ಉಂಟಾದರೂ, ಈಗಾಗಲೇ ತೊಂದರೆಗೆ ಸಿಲುಕಿರುವ ಪ್ರಮುಖ ಆರೋಗ್ಯ ಸಂಸ್ಥೆಗೆ ಇನ್ನೊಂದು ಪೆಟ್ಟು ಬೀಳಲಿದೆ.
|