1984ರ ಸಿಖ್ ವಿರೋಧಿ ಗಲಭೆಗಳಲ್ಲಿ ಆರೋಪಿಯಾದ ಕೇಂದ್ರದ ಮಾಜಿ ಕೇಂದ್ರ ಸಚಿವ ಜಗದೀಶ್ ಟೈಟ್ಲರ್ ಅವರನ್ನು ಸಿಬಿಐ ಬುಧವಾರ ಆರೋಪ ಮುಕ್ತಗೊಳಿಸಿದೆ. 1984ರಲ್ಲಿ ನವದೆಹಲಿಯಲ್ಲಿ ಸಿಖ್ ವಿರೋಧಿ ಗಲಭೆಗಳಿಗೆ ಪ್ರಚೋದನೆ ನೀಡಿದರೆಂಬ ಆರೋಪ ಹೊತ್ತಿದ್ದ ಟೈಟ್ಲರ್ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಮುಕ್ತಗೊಳಿಸಲಾಗಿದೆ.
ಟೈಟ್ಲರ್ ಅವರು ಸಿಖ್ ವಿರೋಧಿ ಗಲಭೆಗಳಲ್ಲಿ ಪಾತ್ರವಹಿಸಿರುವ ಆರೋಪದ ಬಗ್ಗೆ ಸಾಕ್ಷಿಗಳ ಹೇಳಿಕೆಗಳನ್ನು ನಾನಾವತಿ ಆಯೋಗ ದಾಖಲು ಮಾಡಿಕೊಂಡಿರುವ ನಡುವೆ ಸಿಬಿಐ ನಿರ್ಧಾರ ಆಶ್ಚರ್ಯ ಮೂಡಿಸಿದೆ.
ಇಂದಿರಾಗಾಂಧಿ ಹತ್ಯೆಯಾದ ಬಳಿಕ ಸಂಭವಿಸಿದ ಸಿಖ್ ವಿರೋಧಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಸಂಸದರಾದ ಎಚ್.ಕೆ.ಎಲ್. ಭಗತ್ ಮತ್ತು ಸಜ್ಜನ್ ಕುಮಾರ್ ಜತೆ ಗಲಭೆಗಳನ್ನು ಸಂಘಟಿಸಲು ಬಹುಷಃ ಟೈಟ್ಲರ್ ಕೂಡ ಕಾರಣರಾಗಿದ್ದಾರೆಂದು ಆಯೋಗದ ವರದಿ ತಿಳಿಸಿತ್ತು. ಆದರೆ ಟೈಟ್ಲರ್ ಈ ಆರೋಪಗಳಿಗೆ ಪ್ರತಿಕ್ರಿಯಿಸಿ ಅದು ತಪ್ಪು ತಿಳಿವಳಿಕೆಯಿಂದ ಉಂಟಾದ ಕಾರಣ ವಿಶ್ವಾಸಾರ್ಹವಲ್ಲ ಎಂದು ತಳ್ಳಿಹಾಕಿದ್ದರು. ಏತನ್ಮಧ್ಯೆ, ಈ ಪ್ರಕರಣದ ಪ್ರಮುಖ ಸಾಕ್ಷಿಯಾದ ಜಸ್ವೀರ್ ಸಿಂಗ್ ನಾಪತ್ತೆಯಾಗಿದ್ದಾರೆ.
ಅಜ್ಞಾತ ಸ್ಥಳವೊಂದರಿಂದ ಅವರು ಖಾಸಗಿ ಸುದ್ದಿಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ಟೈಟ್ಲರ್ ಬೆಂಬಲಿಗರಿಂದ ತಾವು ಬೆದರಿಕೆ ಎದುರಿಸುತ್ತಿದ್ದು, ಸರ್ಕಾರ ರಕ್ಷಣೆ ನೀಡುವುದಾದರೆ ಮಾತ್ರ ಪ್ರತ್ಯಕ್ಷವಾಗುವುದಾಗಿ ಹೇಳಿದ್ದರು.
ತಾವು ನಾನಾವತಿ ಆಯೋಗದ ಮುಂದೆ ಸಾಕ್ಷಿಯಾಗಿದ್ದರೂ ಯಾವುದೇ ಕೋರ್ಟ್ ಸಾಕ್ಷಿ ನುಡಿಯಲು ಕರೆಸಿಲ್ಲ ಎಂದು ಸಿಂಗ್ ಹೇಳಿದ್ದರು. ತಾವು ನ್ಯಾಯಕ್ಕಾಗಿ 23 ಸುದೀರ್ಘ ವರ್ಷಗಳ ಕಾಲ ಕಾದು ಸರ್ಕಾರ ತಮಗೆ ಮತ್ತು ಕುಟುಂಬಕ್ಕೆ ರಕ್ಷಣೆ ನೀಡುವುದಾದರೆ ಮಾತ್ರ ಸಾಕ್ಷ್ಯ ನುಡಿಯುವುದಾಗಿ ಅವರು ಹೇಳಿದರು.
|