ಸಂಸತ್ತಿನಲ್ಲಿ ಎರಡು ದಿನಗಳ ಕೆಳಗೆ ಅಂಗೀಕೃತವಾದ ವಿವಾದಾತ್ಮಕ ಏಮ್ಸ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹಿ ಹಾಕುವುದರೊಂದಿಗೆ ಏಮ್ಸ್ ನಿರ್ದೇಶಕ ಡಾ. ಪಿ.ವೇಣುಗೋಪಾಲ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ವೇಣುಗೋಪಾಲ್ ಅವರನ್ನು ಹುದ್ದೆಯಿಂದ ತೆಗೆಯಬೇಕೆಂಬ ಉದ್ದೇಶದಿಂದ ಏಮ್ಸ್ ತಿದ್ದುಪಡಿ ಮಸೂದೆ ತರಲಾಗಿದೆಯೆಂದು ಭಾವಿಸಲಾಗಿದೆ.
ಆ.2007ರಲ್ಲಿ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ನಿರ್ದೇಶಕರ ಅಧಿಕಾರಾವಧಿ 5 ವರ್ಷಗಳ ತನಕ ಅಥವಾ 65 ವರ್ಷಗಳನ್ನು ಪೂರೈಸುವ ತನಕ ಎಂದು ಮಸೂದೆಯಲ್ಲಿ ನಿಗದಿ ಮಾಡಲಾಗಿದೆ. ಈ ತಿದ್ದುಪಡಿ ಮಸೂದೆಯು ನಿರ್ದೇಶಕ ಅಧಿಕಾರಾವಧಿ ಮುಗಿಯುವ ಮುನ್ನವೇ ಮೂರು ತಿಂಗಳ ನೋಟೀಸ್ ಮೂಲಕ ತೆಗೆಯಲು ಸರ್ಕಾರಕ್ಕೆ ಹಕ್ಕು ನೀಡುತ್ತದೆ.
ನಿರ್ದೇಶಕರ ಹುದ್ದೆ "ಕಾಲಾವಧಿಯ ನೇಮಕ"ವಾಗಿದ್ದು ಸಮರ್ಥನೀಯ ಕಾರಣವಿಲ್ಲದೇ ಅದನ್ನು ಮೊಟಕುಗೊಳಿಸುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಈ ಮಸೂದೆಯನ್ನು ಮಂಡಿಸಿತ್ತು.
ಈ ಕ್ರಮದ ವಿರುದ್ಧ ವೇಣುಗೋಪಾಲ್ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದು, ಅವರನ್ನು ಬೆಂಬಲಿಸುವ ಏಮ್ಸ್ ವೈದ್ಯರು ಮುಷ್ಕರಕ್ಕೆ ಇಳಿದಿದ್ದರು. ದೆಹಲಿ ಹೈಕೋರ್ಟ್ ಮುಷ್ಕರದ ವಿರುದ್ಧ ಕಠಿಣ ಪದಗಳನ್ನು ಬಳಸಿದ್ದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.
|