ಕುಷ್ಠರೋಗದ ಶಿಬಿರದಲ್ಲಿ ತನ್ನ ಜೀವನವನ್ನು ಕಳೆದಿದ್ದಳೆಂಬುದು 18 ವರ್ಷ ವಯಸ್ಸಿನ ಸಂಗೀತಾ ಮಾಡಿರುವ ಏಕೈಕ ಅಪರಾಧ. ವಿವಾಹವಾಗಿ ಏಳು ತಿಂಗಳು ಕಳೆದಿರುವ ಸಂಗೀತಾಳ ಗರ್ಭಕೋಶದಲ್ಲಿ ಹೊಸ ಜೀವ ಬೆಳೆಯುತ್ತಿದೆ. ಆದರೆ ಅವಳ ಮಾವ ಸಂಗೀತಳಿಂದ ಕುಷ್ಠರೋಗದ ಸೋಂಕು ತನ್ನ ಕುಟುಂಬಕ್ಕೆ ಹರಡಬಹುದೆಂದು ಶಂಕಿಸಿದ್ದು, ಅವರ ವಿರೋಧದಿಂದ ವಿವಾಹ ಸಂಬಂಧ ಮುರಿದುಬೀಳುವ ಹಂತಕ್ಕೆ ತಲುಪಿದೆ.
ಬೌರಾ- ಗೌರ್‌ಕುಟಿ ಗ್ರಾಮಕ್ಕೆ ಸೇರಿದ ಸುನಿಲ್ ಕುಮಾರ್ ಹನ್ಸ್ಡ ಅವರನ್ನು ಸಂಗೀತ ವಿವಾಹವಾಗಿದ್ದಳು. ಕುಷ್ಠರೋಗಿಗಳಿಗೆ ನೆರವು ನೀಡುವ ಸ್ವಯಂ ಸೇವಾ ಸಂಘಟನೆಯಲ್ಲಿ ಕೆಲಸ ಮಾಡುವ ಸಂಗೀತಾ ತಂದೆ ಗ್ರಾಮದ ಸಮೀಪದ ಕುಷ್ಠರೋಗದ ಶಿಬಿರದಲ್ಲೇ ವಾಸಿಸುತ್ತಿರುವುದು ಈ ಅಪವಾದಕ್ಕೆ ಕಾರಣವಾಗಿದೆ. ಸಂಗೀತ ವೈದ್ಯಕೀಯ ಪರೀಕ್ಷೆ ಸಹ ಮಾಡಿಸಿಕೊಂಡಿದ್ದು ಆಕೆಗೆ ಕುಷ್ಠರೋಗದ ಸೋಂಕು ಇಲ್ಲದಿರುವುದು ದೃಢಪಟ್ಟಿದೆ.
ಆದರೆ ಸುನಿಲ್ ತಂದೆ ಅದನ್ನು ಸುತಾರಾಂ ಒಪ್ಪುತ್ತಿಲ್ಲ. ಅವರು ಈ ಸಂಬಂಧವನ್ನು ನಿರಾಕರಿಸಿ ಗ್ರಾಮದ ಮುಖ್ಯಸ್ಥರು ಮತ್ತು ಕೆಲವು ಪಂಚಾಯಿತಿ ಸದಸ್ಯರ ನೆರವನ್ನು ಪಡೆದಿದ್ದಾರೆ. ತಾನು ಕುಷ್ಠರೋಗದ ಶಿಬಿರದಲ್ಲಿ ವಾಸಿಸುತ್ತಿರುವುದರಿಂದ ಮಗುವಿಗೂ ಕುಷ್ಠರೋಗದ ಸೋಂಕು ಅಂಟಬಹುದೆಂಬುದು ಅವರ ಆತಂಕವಾಗಿದೆ ಎಂದು ಸಂಗೀತ ಹೇಳುತ್ತಾಳೆ.
ಸುನಿಲ್‌ನಿಗೆ ಕೂಡ ಸಂಗೀತಳನ್ನು ಬಿಟ್ಟುಬಿಡುವಂತೆ ಅಥವಾ ಬಹಿಷ್ಕಾರ ಎದುರಿಸುವಂತೆ ಅವನ ತಂದೆ ಎಚ್ಚರಿಸಿದ್ದಾರೆ. ಕಾಯಿಲೆಯ ಬಗ್ಗೆ ಸಂಗೀತ ನಕಾರಾತ್ಮಕ ಫಲಿತಾಂಶ ಪಡೆದಿದ್ದರೂ ನನ್ನ ತಂದೆ ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಸುನಿಲ್ ಹೇಳುತ್ತಾನೆ.
|