ಭಾರತದಲ್ಲಿ ಸುಮಾರು 30 ಲಕ್ಷ ಜನರು ಎಚ್‌ಐವಿ ಜತೆಗೆ ಜೀವಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವ ಏಡ್ಸ್ ದಿನವಾದ ಶನಿವಾರ, ಜನರಿಗೆ ಏಡ್ಸ್ ಬಗ್ಗೆ ಇರುವ ತಪ್ಪುಕಲ್ಪನೆಯನ್ನು ಹೋಗಲಾಡಿಸಿ ಸ್ಪಷ್ಟ ಚಿತ್ರಣ ನೀಡುವ ಪ್ರಯತ್ನವಾಗಿ, ಮೆಟ್ರೋಪೊಲಿಸ್ ಆರೋಗ್ಯ ಸೇವೆಗಳ ನಿರ್ದೇಶಕ ಡಾ. ನಿಲೇಶ್ ಶಾ ಎಚ್‌ಐವಿ ಬಗ್ಗೆ ವಿವರಣೆ ನೀಡುತ್ತಾ, ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದೇಹದ ರೋಗ ನಿರೋಧಕ ಶಕ್ತಿಯನ್ನು ಎಚ್‌ಐವಿ ದುರ್ಬಲಗೊಳಿಸುತ್ತದೆಂದು ಹೇಳಿದರು.
ಸೋಂಕಿನ ಪ್ರಾರಂಭದ ಹಂತಗಳಲ್ಲಿ ವ್ಯಕ್ತಿಗೆ ರೋಗಲಕ್ಷಣಗಳು ಕಾಣಿಸುವುದಿಲ್ಲ. ಆದರೆ ಕ್ರಮೇಣ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ರೋಗಿಯು ಕಾಯಿಲೆಗಳು ಮತ್ತಿತರ ಸೋಂಕುಗಳಿಗೆ ಸುಲಭದಲ್ಲಿ ಈಡಾಗುತ್ತಾನೆಂದು ನುಡಿದರು.ಎಚ್‌ಐವಿ ಸೋಂಕಿನ ಕೊನೆಯ ಹಂತವೇ ಏಡ್ಸ್. ಎಚ್‌ಐವಿ ಸೋಂಕಿನ ವ್ಯಕ್ತಿಗೆ ಏಡ್ಸ್ ಕಾಯಿಲೆ ಬರಲು ಸುಮಾರು 10-15 ವರ್ಷಗಳು ಹಿಡಿಯುತ್ತದೆಂದರು. ಎಚ್‌ಐವಿ ಪೀಡಿತ ವ್ಯಕ್ತಿಯ ಜತೆ ಕೆಲಸ ಮಾಡುವುದರಿಂದ, ವೈರಸ್ ಹೊಂದಿರುವವರ ಹತ್ತಿರ ನಿಲ್ಲುವುದರಿಂದ ಅಥವಾ ಸೋಂಕಿನ ವ್ಯಕ್ತಿ ಜತೆ ಆಹಾರ ಹಂಚಿಕೊಳ್ಳುವುದರಿಂದ ಎಚ್‌ಐವಿ ಹರಡುತ್ತದೆಂಬ ತಪ್ಪುಕಲ್ಪನೆಯನ್ನು ಅವರು ಹೋಗಲಾಡಿಸಿದರು.
ವಿಶ್ವ ಏಡ್ಸ್ ದಿನದ ಅಂಗವಾಗಿ ಎಚ್‌ಐವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು, ಸಲಹೆ ಮತ್ತು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಜನರಿಗೆ ಪ್ರೋತ್ಸಾಹಿಸುವ ಸಲುವಾಗಿ ಜಾನ್ಸ್ ಹಾಪ್ಕಿನ್ಸ್ ವಿವಿಯ ಸಾರ್ವಜನಿಕ ಆರೋಗ್ಯದ ಬ್ಲೂಮ್‌ಬರ್ಗ್ ಶಾಲೆಯು ಸತತವಾಗಿ ಮೂರನೇ ವರ್ಷ ನಗರದ ಡಬ್ಬಾವಾಲಾಗಳನ್ನು ಸಜ್ಜುಗೊಳಿಸಿದೆ.
ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ 5000 ಡಬ್ಬಾವಾಲಾಗಳು ಮುಂಬೈಗರಿಗೆ ಲಂಚ್ ಸರಬರಾಜು ಮಾಡುವಾಗ ಎಚ್‌ಐವಿ/ಏಡ್ಸ್ ಬಗ್ಗೆ ಸಂದೇಶದ ಕಿಟ್ ಪೂರೈಸಿದರು. ಡಬ್ಬಾವಾಲಾಗಳು ವಿಶೇಷ ಟಿ- ಷರ್ಟ್‌ಗಳಲ್ಲಿ ಸಮಗ್ರ ಸವಹೆ ಮತ್ತು ಟೆಸ್ಟಿಂಗ್ ಕೇಂದ್ರದ ಪ್ರಚಾರದ ಲೋಗೊ ಮತ್ತು ಘೋಷಣೆಗಳ ಮುದ್ರೆಗಳೊಂದಿಗೆ ತಮ್ಮ ಗ್ರಾಹಕರಿಗೆ ಡಬ್ಬಗಳನ್ನು ವಿತರಿಸಿದರು.
|