ವಿಶ್ವಾದ್ಯಂತ ಪಾರಂಪರಿಕ ಸ್ಥಳಗಳು ಮೂಲಭೂತವಾದಿಗಳು ಮತ್ತು ಭಯೋತ್ಪಾದಕರಿಂದ ನವೀಕೃತ ಬೆದರಿಕೆಗೆ ಒಳಗಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಸೋಮವಾರ ಎಚ್ಚರಿಸಿದ್ದು, ಸಂಘರ್ಷದ ಪರಿಸ್ಥಿತಿಯಲ್ಲಿ ಕೂಡ ಪಾರಂಪರಿಕ ಸ್ಮಾರಕಗಳನ್ನು ರಕ್ಷಿಸಲು ಜಾಗೃತಿಯನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
ಆಘ್ಫಾನಿಸ್ತಾನದಲ್ಲಿ ಬಾಮಿಯಾನ್ ಬುದ್ಧನ ಪ್ರತಿಮೆಯ ನಾಶ ಇದಕ್ಕೊಂದು ಅಪ್ಪಟ ಮತ್ತು ವಿಷಾದನೀಯ ನಿದರ್ಶನವಾಗಿದೆ ಎಂದು ಇಲ್ಲಿನ ನ್ಯಾಷನಲ್ ಟ್ರಸ್ಟ್‌ನ ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸುತ್ತಾ ಅವರು ಹೇಳಿದರು.
ಪೂರ್ವಕಾಲದಲ್ಲಿ ಮಾನವಜನಾಂಗ ಉಳಿಸಿಹೋದ ಪಾರಂಪರಿಕ ವಸ್ತುಗಳನ್ನು ನಾಶಮಾಡುವ ಹಕ್ಕು ಯಾರಿಗೂ ಇಲ್ಲವೆಂಬ ಸಂದೇಶವನ್ನು ಜಗತ್ತಿನಾದ್ಯಂತ ಕಳಿಸುವ ಅಗತ್ಯವಿದೆ ಎಂದು ಅವರು ನುಡಿದರು.
ಭಾರತವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ, ಉಳಿಸುವ ಮತ್ತು ಉತ್ತೇಜಿಸುವ ಅಗತ್ಯವಿದೆ ಎಂದು ಹೇಳಿದ ಅವರು ನಾವು ಯಥಾಸ್ಥಿತಿಯಿಂದ ಮಾತ್ರ ತೃಪ್ತರಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ನಮ್ಮ ಸಾಂಸ್ಕೃತಿ ಆಸ್ತಿಗಳು ನೈಸರ್ಗಿಕ ಮತ್ತು ಮಾನವನಿರ್ಮಿತ ವಿವಿಧ ಬೆದರಿಕೆಗಳಿಗೆ ಶತಮಾನಗಳಿಂದ ತುತ್ತಾಗಿದೆ.
ನಿಸರ್ಗದ ಪ್ರಕೋಪಗಳ ಸಹಿತ ದಾಳಿಕೋರರು, ಶೋಧಕರು, ವಸಾಹತುಶಾಹಿಗಳು ಮತ್ತು ಕಳ್ಳರು ಕೂಡ ಸಾಂಸ್ಕೃತಿಕ ಪರಂಪರೆ ನಾಶಕ್ಕೆ ಪಾಲು ನೀಡಿದ್ದಾರೆಂದು ಮೂರು ದಿನಗಳ ಸಭೆಯಲ್ಲಿ ಭಾಗವಹಿಸಿದ್ದ ಸಂರಕ್ಷಕ ತಜ್ಞರಿಗೆ ಹೇಳಿದರು.
|